ಶ್ರೀನಗರ: ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ವಿದೇಶಗಳಲ್ಲಿ ಆರೋಪಗಳನ್ನು ಮಾಡುವ ಮೂಲಕ ಭಾರತಕ್ಕೆ 'ಕೆಟ್ಟ ಹೆಸರು' ತರುವ ಯತ್ನವನ್ನು ಪತ್ರಿಪಕ್ಷಗಳು ನಡೆಸುತ್ತಿವೆ ಎಂದು ರಾಜ್ಯ ಇಂಧನ ಮತ್ತು ಬೃಹತ್ ಕಾರ್ಖಾನೆಗಳ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ಅವರು ಕಿಡಿಕಾರಿದರು.
'ಜನರು ನರೇಂದ್ರ ಮೋದಿಯವರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ' ಎಂದೂ ಅವರು ಹೇಳಿದರು.
ಇಲ್ಲಿ ಪ್ರಧಾನಮಂತ್ರಿಗಳ ರೋಜ್‌ಗಾರ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಗುರ್ಜರ್ ಅವರು ಇತ್ತೀಚೆಗೆ ಬ್ರಿಟನ್‌ನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ. 'ಗಾಂಧಿ ಪರಿವಾರ ತಮ್ಮನ್ನು ತಾವು ಕಾನೂನಿಗಿಂತ ಮೇಲೆಂದು ಪರಿಭಾವಿಸಿದಂತಿದೆ' ಎಂದು ಟೀಕಿಸಿದ್ದಾರೆ.
'ದೇಶದಲ್ಲಿ 10 ವರ್ಷಗಳ ಕಾಲ ಮೈತ್ರಿ ಸರ್ಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷದ ಆಡಳಿತದ ಬಗ್ಗೆ ಜನತೆಗೆ ಗೊತ್ತಿದೆ. ಅವರ ಅಧಿಕಾರದ ಅವಧಿಯಲ್ಲಿ ಸಚಿವರು ಜೈಲಿಗೆ ಹೋಗುವ ಮೂಲಕ ದೇಶಕ್ಕೆ ಕೆಟ್ಟ ಹೆಸರು ತಂದಿದ್ದಾರೆ, ಧನಾತ್ಮಕವಾಗಿ ವರ್ತಿಸದೆ ರಾಷ್ಟ್ರದ ಗೌರವಕ್ಕೆ ಚ್ಯುತಿ ತಂದಿದ್ದಾರೆ' ಎಂದು ಕಿಡಿಕಾರಿದರು.
'ಕೆಟ್ಟ ಹೆಸರು ತರುವ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಈಗ ಜನರು ಬಯಸುತ್ತಿಲ್ಲ' ಎಂದು ಗುರ್ಜರ್ ಅವರು ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದರು.