ಕೊಚ್ಚಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಶಾಸಕ ಜಾನಿ ನೆಲ್ಲೂರ್ ಅವರು ಶನಿವಾರ 'ರಾಷ್ಟ್ರೀಯ ಪ್ರಗತಿಪರ ಪಕ್ಷ (ಎನ್‌ಪಿಪಿ)' ಎಂಬ ಹೊಸ ರಾಜಕೀಯ ಪಕ್ಷವೊಂದನ್ನು ಘೋಷಿಸಿದ್ದಾರೆ.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ವಿವಿ ಆಗಸ್ಟಿನ್ ಪಕ್ಷದ ಅಧ್ಯಕ್ಷರಾಗಿದ್ದರೆ, ನೆಲ್ಲೋರ್ ಎನ್‌ಪಿಪಿಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಹೊಸ ಪಕ್ಷ ಘೋಷಣೆಗೆಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗಸ್ಟಿನ್ ಅವರು, ಎನ್‌ಪಿಪಿಯ ಹೆಸರು ಮತ್ತು ಧ್ವಜವನ್ನು ನೋಂದಾಯಿಸಲು ಶೀಘ್ರದಲ್ಲೇ ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿ ಹೇಳಿದರು.
'ನಾವು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಇಲ್ಲ. ನಮಗೆ ಕಾಂಗ್ರೆಸ್, ಸಿಪಿಐ(ಎಂ) ಅಥವಾ ಬಿಜೆಪಿಗೆ ಯಾವುದೇ ನಿರ್ದಿಷ್ಟ ಸಂಬಂಧವಿಲ್ಲ. ನಾವು ಸ್ವತಂತ್ರ ದೃಷ್ಟಿಕೋನವನ್ನು ಹೊಂದಿದ್ದೇವೆ' ಎಂದು ಅಗಸ್ಟಿನ್ ಸುದ್ದಿಗಾರರಿಗೆ ತಿಳಿಸಿದರು.
ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಪಕ್ಷದ ಬೇಡಿಕೆಗಳನ್ನು ಅವರ ಮುಂದಿಡಲು ಎನ್‌ಪಿಪಿ ಅವರನ್ನು ಭೇಟಿಯಾಗಲಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಎನ್‌ಪಿಪಿಗೆ ಸೇರಲಿದ್ದಾರೆ ಎಂದು ನೆಲ್ಲೋರ್ ಹೇಳಿದರು.
ಕೇರಳ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ನೆಲ್ಲೋರ್ ಅವರು ಏಪ್ರಿಲ್ 19ರಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವಾದ ಯುಡಿಎಫ್‌ಗೆ ರಾಜೀನಾಮೆ ನೀಡಿದ್ದರು ಮತ್ತು ರಾಷ್ಟ್ರ ಮಟ್ಟದ ಪಕ್ಷವನ್ನು ಕಟ್ಟಿದ್ದಾರೆ. ಪಕ್ಷವು ರೈತರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ನೆಲ್ಲೋರ್ ಅವರಿಂದ ಹೊಸ ಪಕ್ಷ ರಚನೆಯು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಸೇರಲು ಮತ್ತು ಯಾವುದೇ ಶಾಸಕರು ಅಥವಾ ಸಂಸದರನ್ನು ಹೊಂದಿರದ ಕೇಸರಿ ಪಕ್ಷವು ದಕ್ಷಿಣ ರಾಜ್ಯದಲ್ಲಿ ನೆಲೆಯೂರಲು ಸಹಾಯ ಮಾಡುವ ಕ್ರಮ ಇದಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.