HEALTH TIPS

ಸಾಂವಿಧಾನಿಕ ಹುದ್ದೆಯಲ್ಲಿರುವವರು ತ್ವರಿತ ನಿರ್ಧಾರ ಕೈಗೊಳ್ಳಬೇಕು: ಸುಪ್ರೀಂಕೋರ್ಟ್

                 ವದೆಹಲಿ: ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು, ತಮ್ಮ ಮುಂದೆ ಬರುವ ಮಸೂದೆಗಳ ಕುರಿತು ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು. ಇಂಥ ಸಂದರ್ಭದಲ್ಲಿ, ಸಂವಿಧಾನದ 200(1) ವಿಧಿಯಲ್ಲಿನ 'ಸಾಧ್ಯವಾದಷ್ಟು ತ್ವರಿತವಾಗಿ' ಎಂಬ ಉಲ್ಲೇಖವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

              ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರಿದ್ದ ನ್ಯಾಯಪೀಠ, 'ಸಾಧ್ಯವಾದಷ್ಟು ತ್ವರಿತವಾಗಿ ಎಂಬುದು ಸಂವಿಧಾನದಲ್ಲಿ ಮಹತ್ವದ ಉದ್ದೇಶ ಹೊಂದಿದೆ. ರಾಜ್ಯಪಾಲರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ಹೇಳಿತು.

                 ವಿಧಾನಸಭೆಯಲ್ಲಿ ಅಂಗೀಕರಿಸಲಾದ ಹತ್ತು ಮಸೂದೆಗಳು ರಾಜ್ಯಪಾಲರ ಅಂಕಿತಕ್ಕಾಗಿ ಕಾಯುತ್ತಿವೆ. ಮಸೂದೆಗಳಿಗೆ ಅಂಕಿತ ಹಾಕುವಂತೆ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್‌ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ತೆಲಂಗಾಣ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿತು.

                ಇದಕ್ಕೂ ಮುನ್ನ, ಸಾಲಿಸಿಟರ್‌ ಜನರಲ್‌ ಮೆಹ್ತಾ ಹಾಗೂ ಹಿರಿಯ ವಕೀಲ ದುಷ್ಯಂತ್‌ ದವೆ ನಡುವೆ ಕಾವೇರಿದ ಚರ್ಚೆ ನಡೆಯಿತು.

            ತೆಲಂಗಾಣ ರಾಜ್ಯಪಾಲರ ಪರ ಹಾಜರಿದ್ದ ಮೆಹ್ತಾ, 'ಸದ್ಯ ಯಾವುದೇ ಮಸೂದೆ ಅಂಕಿತಕ್ಕೆ ಬಾಕಿ ಉಳಿದಿಲ್ಲ. ಮಸೂದೆಗಳ ಕುರಿತು ನಿರ್ಧರಿಸುವಾಗ ಆದಷ್ಟು ತ್ವರಿತವಾಗಿ ಎಂಬ ನ್ಯಾಯಪೀಠದ ಅಭಿಪ್ರಾಯವನ್ನು ಆದೇಶದಲ್ಲಿ ಉಲ್ಲೇಖಿಸುವ ಅಗತ್ಯ ಇರಲಲಿಲ್ಲ' ಎಂದರು.

             ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, 'ಈ ರಾಜ್ಯಪಾಲರನ್ನೇ (ತಮಿಳಿಸೈ ಸೌಂದರರಾಜನ್) ಉದ್ದೇಶಿಸಿ ನಾವು ಈ ಮಾತನ್ನು ಹೇಳಿಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದೇವೆ' ಎಂದು ಹೇಳಿದರು.

             'ಇದರ ಉಲ್ಲೇಖ ಅಗತ್ಯವಿರಲಿಲ್ಲ. ನಾನು ಇದಕ್ಕಿಂತ ಹೆಚ್ಚಿಗೇನೂ ಹೇಳುವುದಿಲ್ಲ. ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಲು ಇಚ್ಛಿಸುವುದಿಲ್ಲ' ಎಂದು ಮೆಹ್ತಾ ಹೇಳಿದರು.

ತೆಲಂಗಾಣ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ, 'ಸೂಕ್ತ ನಿರ್ದೇಶನ ಇರುವ ಆದೇಶವನ್ನು ಹೊರಡಿಸುವ ಮೂಲಕ ಈ ವಿಷಯಕ್ಕೆ ಅಂತ್ಯ ಹಾಡಬೇಕು' ಎಂದು ಕೋರಿದರು.

'ಮಧ್ಯಪ್ರದೇಶದಲ್ಲಿ ರಾಜ್ಯಪಾಲರು ಮಸೂದೆಗಳಿಗೆ ಒಂದು ವಾರದೊಳಗೆ ಅಂಕಿತ ಹಾಕುತ್ತಾರೆ. ಗುಜರಾತಿನಲ್ಲಿ ಒಂದು ತಿಂಗಳ ಒಳಗೆ ಹಾಕಲಾಗುತ್ತದೆ. ತೆಲಂಗಾಣದಲ್ಲಿ ವಿರೋಧ ಪಕ್ಷ ನೇತೃತ್ವದ ಸರ್ಕಾರ ಇರುವುದರಿಂದ ಮಸೂದೆಗಳಿಗೆ ಅಂಕಿತ ಹಾಕುವುದು ವಿಳಂಬವಾಗುತ್ತಿದೆ' ಎಂದ ದವೆ ಆರೋಪಿಸಿದರು.

           ಈ ಮಾತಿಗೆ ಆಕ್ಷೇಪಿಸಿದ ಮೆಹ್ತಾ, 'ಒಂದು ವಿಷಯವನ್ನು ಈ ರೀತಿಯಾಗಿ ಸಾರ್ವತ್ರೀಕರಣಗೊಳಿಸಲಾಗದು' ಎಂದರು.

                 ಆಗ, 'ನೀವು ಕೇಂದ್ರ ಸರ್ಕಾರದಿಂದ ನೇಮಕವಾದವರು. ಹೀಗಾಗಿ, ನೀವು ಒಂದು ವಿಷಯವನ್ನು ಸಾರ್ವತ್ರೀಕರಣಗೊಳಿಸಬಾರದು' ಎಂದು ದವೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, 'ನ್ಯಾಯಾಲಯದಲ್ಲಿ ಕೂಗಾಡಿದರೆ ಯಾವುದೇ ಪ್ರಯೋಜನವಾಗದು' ಎಂದರು.

'ಪ್ರತಿ ಬಾರಿ ನಾನು ನ್ಯಾಯಪೀಠದ ಮುಂದೆ ಹಾಜರಾದಾಗ, ಅವರಲ್ಲಿ (ಮೆಹ್ತಾ) ನನ್ನ ಕುರಿತು ಅಸಹನೆ ಕಂಡು ಬರುತ್ತದೆ. ಅವರು ಬಹಳ ಕೀಳುಮಟ್ಟಕ್ಕೆ ಇಳಿದಿದ್ದಾರೆ. ನನ್ನ 44 ವರ್ಷಗಳ ವಕೀಲಿ ವೃತ್ತಿಯಲ್ಲಿಯೇ ಇಂಥದ್ದನ್ನು ನೋಡಿಲ್ಲ' ಎಂದು ದವೆ ಆರೋಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries