ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಂಗ್‌ಚುಕ್ ಅವರೊಂದಿಗೆ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಆರ್ಥಿಕ ಸಹಕಾರ ಸೇರಿದಂತೆ ಇನ್ನಿತರ ಮಹತ್ವದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವುದರೆಡೆ ಗಮನ ಹರಿಸುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಚೀನಾವು ಭೂತಾನ್‌ನ ರಾಜಧಾನಿ ಥಿಂಪು ಮೇಲೆ ತನ್ನ ಪ್ರಭಾವ ವಿಸ್ತರಿಸುತ್ತಿರುವ ಹೊತ್ತಿನಲ್ಲೇ ಎರಡು ದಿನಗಳ ಪ್ರವಾಸ ಕೈಗೊಳ್ಳುವ ಸಲುವಾಗಿ ವಾಂಗ್‌ಚುಕ್ ಅವರು ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದಾರೆ.
'ಭೂತಾನ್‌ನ ಭವಿಷ್ಯಕ್ಕಾಗಿ ಹಾಗೂ ಭಾರತದೊಂದಿಗಿನ ಬಾಂಧವ್ಯ ಬಲಗೊಳಿಸುವ ದಿಸೆಯಲ್ಲಿ ವಾಂಗ್‌ಚುಕ್ ಅವರು ಹೊಂದಿರುವ ದೂರದೃಷ್ಟಿಯು ಮೆಚ್ಚುವಂತಹದ್ದು' ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೋಮವಾರ ತಿಳಿಸಿದ್ದರು.
ಕಾರ್ಯತಂತ್ರದ ದೃಷ್ಟಿಯಿಂದ ಭಾರತದ ಪಾಲಿಗೆ ಭೂತಾನ್ ಪ್ರಮುಖ ರಾಷ್ಟ್ರವಾಗಿದೆ. ಹಿಂದಿನ ಕೆಲ ವರ್ಷಗಳಲ್ಲಿ ರಕ್ಷಣೆ ಮತ್ತು ಭದ್ರತಾ ವಲಯಗಳಲ್ಲಿ ಉಭಯ ದೇಶಗಳ ನಡುವಣ ಸಹಕಾರವು ಗಣನೀಯವಾಗಿ ವಿಸ್ತರಣೆಯಾಗಿರುವುದು ಇದಕ್ಕೊಂದು ನಿದರ್ಶನ.
ಈ ಹಿಂದೆ ಭೂತಾನ್ ಗಡಿಯಲ್ಲಿರುವ ಡೋಕ್ಲಾಮ್ ಪ್ರಸ್ಥಭೂಮಿ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದ ಚೀನಾಕ್ಕೆ ಭಾರತ ಪ್ರತಿರೋಧವೊಡ್ಡಿತ್ತು. ಹೀಗಾಗಿ ಉಭಯ ದೇಶಗಳ ಸೇನೆಗಳ ನಡುವೆ 73 ದಿನಗಳ ಕಾಲ ಸಂಘರ್ಷ ಏರ್ಪಟ್ಟಿತ್ತು. ಅನಂತರ ಭಾರತ ಮತ್ತು ಭೂತಾನ್ ನಡುವಣ ಕಾರ್ಯತಂತ್ರದ ಸಂಬಂಧವು ಮತ್ತಷ್ಟು ಬಲಗೊಂಡಿತ್ತು. ಹಲವು ಸುತ್ತುಗಳ ಮಾತುಕತೆ ಬಳಿಕ ಭಾರತ ಮತ್ತು ಚೀನಾ ನಡುವಣ ಸಂಘರ್ಷವು ಕೊನೆಗೊಂಡಿತ್ತು.