ಡೆಹ್ರಾಡೂನ್: ಹುಲಿ ದಾಳಿ ಭೀತಿ ಹಿನ್ನಲೆಯಲ್ಲಿ ಉತ್ತರಾಖಂಡದ ಹಲವು ಗ್ರಾಮಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಹುಲಿ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲಾಡಳಿತ ಜಿಲ್ಲೆಯ ರಿಖಾ ನಿಖಾಲ್ ಮತ್ತು ಧುಮಾಕೋಟ್ ತಹಸಿಲ್ ನ ಹತ್ತಾರು ಹಳ್ಳಿಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 7ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿದೆ. ಏಪ್ರಿಲ್ 17 ಮತ್ತು 18ರಂದು ರಿಖಾನಿಖಾಲ್ ಮತ್ತು ಧುಮಾಕೋಟ್ ನ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಪೌರಿ ಜಿಲ್ಲಾಧಿಕಾರಿ ಆಶೀಷ್ ಚೌಹಾಣ್ ಆದೇಶ ಜಾರಿಗೊಳಿಸಿದ್ದಾರೆ.
"ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ ಮತ್ತು ರಿಖಾನಿಖಾಲ್ ಮತ್ತು ಧುಮಾಕೋಟ್ ತಹಸಿಲ್‌ಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಏಪ್ರಿಲ್ 17 ಮತ್ತು 18 ರಂದು ಮುಚ್ಚಲಾಗುವುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉತ್ತರಾಖಂಡ್ ನ ಪೌರಿ ಗರ್ವಾಲ್ ನ ನೈನಿದಂಡಾ ಪ್ರದೇಶದಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ನಂತರ ಈ ನಿಷೇಧಾಜ್ಞೆ ಹೊರಡಿಸಲಾಗಿದೆ. ಏಪ್ರಿಲ್ 13 ಮತ್ತು 15 ರಂದು ರಿಖಾನಿಖಾಲ್ ಮತ್ತು ಧುಮಾಕೋಟ್ ಪ್ರದೇಶದಲ್ಲಿ ಹುಲಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೃತರಿಬ್ಬರೂ ನಿವೃತ್ತ ಶಿಕ್ಷಕರಾಗಿದ್ದರು ಎಂದು ವರದಿ ತಿಳಿಸಿದೆ.
ಹುಲಿ ದಾಳಿ ಬೆನ್ನಲ್ಲೇ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಪೌರಿ ಗಡ್ವಾಲ್ ಜಿಲ್ಲಾಡಳಿತವು ಭಾನುವಾರ ರಾತ್ರಿ ಹುಲಿ ದಾಳಿ ಭೀತಿಯ ಹಿನ್ನಲೆಯಲ್ಲಿ ರಿಖಾನಿಖಾಲ್ ಮತ್ತು ಧುಮಾಕೋಟ್ ತಹಸಿಲ್‌ಗಳ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕರ್ಫ್ಯೂ ವಿಧಿಸಿದೆ. ಹುಲಿ ಬಾಧಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡುವಂತೆ ಧೂಮಕೋಟ್ ಮತ್ತು ರಿಖಾನಿಖಾಲ್ ತಹಸೀಲ್ದಾರ್‌ಗಳಿಗೆ ತಿಳಿಸಲಾಗಿದ್ದು, ಹುಲಿ ಬಾಧಿತವಾಗಿರುವ ಸೂಕ್ಷ್ಮ ಮನೆಗಳು ಮತ್ತು ಕುಟುಂಬಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.