ತಿರುವನಂತಪುರಂ: ಜನನಿಬಿಡ ರಸ್ತೆಯಲ್ಲಿ ತಾಯಿಯ ಎದುರಲ್ಲೇ ಮಗಳ ಮೇಲೆ ದುಷ್ಟನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನುಷ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ಶಿಹಾಬುದ್ಧೀನ್ (27) ಎಂದು ಗುರುತಿಸಲಾಗಿದೆ.
ಫೋರ್ಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲ್ಲಂ ಮೂಲದ ಮಹಿಳೆಯ ಮೇಲೆ ತಮಿಳುನಾಡು ಮೂಲದ ಶಿಹಾಬುದ್ಧೀನ್, ಅಟ್ಟಕುಲಂಗರದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ನಡೆದ ಒಂದು ದಿನದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸೋಮವಾರ ಹಾಡಹಗಲೇ ಜನನಿಬಿಡ ರಸ್ತೆಯ ಮಧ್ಯೆದಲ್ಲೇ ನಡೆದಿತ್ತು.
ಬಟ್ಟೆ ಖರೀದಿಸಲು ತಾಯಿಯೊಂದಿಗೆ ಸಂತ್ರಸ್ತ ಮಹಿಳೆ ನಗರಕ್ಕೆ ಬಂದಿದ್ದಳು. ಈ ವೇಳೆ ರಸ್ತೆ ದಾಟುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿ, ನಡುರಸ್ತೆಯಲ್ಲೇ ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಘಟನೆ ನಡೆದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಛಲೈನಲ್ಲಿರುವ ತನ್ನ ನಿವಾಸಕ್ಕೆ ಆಗಮಿಸಿದ ಬಳಿಕ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ಶಿಹಾಬುದ್ದೀನ್ ಚಿನ್ನಾಭರಣ ವ್ಯಾಪಾರಿ. ಸಂತ್ರಸ್ತೆ ಆರೋಪಿಯನ್ನು ಗುರುತಿಸಿದ್ದಾಳೆಂದು ತಿಳಿದುಬಂದಿದೆ.