ಬದಿಯಡ್ಕ: ವಿದ್ಯಾಗಿರಿ ಪೀಲಿತ್ತಡ್ಕದ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿಯಲ್ಲಿ ನೂತನ ತುಳು ಲಿಪಿ ನಾಮಫಲಕವನ್ನು ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕದ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಭಾಷೆ ಶೀಘ್ರದಲ್ಲಿ 8ನೇ ಪರಿಚ್ಚೆದಕ್ಕೆ ಸೇರುವಂತಾಗಲಿ ಎಂದರು. ಸ್ಥಳದ ಹಿರಿಯ ದೈವ ಪಾತ್ರಿ ನಿಟ್ಟೋನಿ ತುಳು ಲಿಪಿ ನಾಮಫಲಕವನ್ನು ಉದ್ಘಾಟಿಸಿದರು.
ವಿಟ್ಲ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೈ ಶಂಕರ ಪಾಟಾಳಿ ಮಾತನಾಡಿ, ತುಳು ಭಾಷೆ, ಲಿಪಿ ತುಳುನಾಡಿನಲ್ಲಿ ಅಲ್ಲದೆ ಬೇರೆ ಹೊರ ರಾಜ್ಯಗಳಲ್ಲಿ ಕೂಡ ಪಸರಿಸಲಿ ಹಾಗೂ ತುಳುನಾಡಿನ ಸಂಸ್ಕøತಿ ಎಲ್ಲೆಡೆ ಪಸರಿಸಲಿ ಎಂದರು. ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಹರಿಕಾಂತ್ ಸಾಲಿಯಾನ್ ಸ್ವಾಗತಿಸಿ ನಿರೂಪಿಸಿದರು. ಜೈ ತುಳುನಾಡು ಸಂಘಟನೆಯ ಸಹ ಕಾರ್ಯದರ್ಶಿ ಜಗನ್ನಾಥ್ ಕುಲಾಲ್ ವಂದಿಸಿದರು. ಜೈತುಳುನಾಡ್ ಸಂಘಟನೆಯ ಸದಸ್ಯ ಸುಶಾಂತ್ ಕುಲಾಲ್ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸನ್ನಿದಿಯ ದೈವ ಪಾತ್ರಿ ಕೇಶವ ಇವರಿಗೆ ಜೈ ತುಳುನಾಡು ಸಂಘಟನೆ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು.