ನವದೆಹಲಿ:ಸರಕಾರವು ಕೇವಲ ಒಂದು ಸಮುದಾಯಕ್ಕಾಗಿ ಕೆಲಸ ಮಾಡಿದೆ ಮತ್ತು ಒಂದು ಧಾರ್ಮಿಕ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳನ್ನು ಆಧರಿಸಿ ಕುಟುಂಬಗಳ ನಡುವೆ ತಾರತಮ್ಯವೆಸಗಿದೆ ಎನ್ನಲು ಯಾವುದೇ ಪುರಾವೆಯಿಲ್ಲ ಎಂದು ಪ್ರಧಾನಿ ಮಂತ್ರಿಗಳಿಗೆ ಆರ್ಥಿಕ ಸಲಹಾ ಮಂಡಳಿ (ಇಎಸಿ)ಯು ಹೇಳಿದೆ.
ಕೆಲವು ಸಂದರ್ಭಗಳಲ್ಲಿ ಅಲ್ಪಸಂಖ್ಯಾತರು ವಿದ್ಯುತ್ ಮತ್ತು ಬ್ಯಾಂಕ್ ಖಾತೆಗಳ ಸೌಲಭ್ಯ ಯೋಜನೆಗಳ ಮೂಲಕ ಬಹುಸಂಖ್ಯಾತರಿಗಿಂತ ಹೆಚ್ಚಿನ ಲಾಭಗಳನ್ನು ಪಡೆದುಕೊಂಡಿದ್ದಾರೆ ಎಂದು ಇಎಸಿ ಮಂಡಿಸಿರುವ ಪ್ರಬಂಧವು ಹೇಳಿದೆ.
ಶಮಿಕಾ ರಾವು ಅವರು ಬರೆದಿರುವ 'ಆಚರಣೆಯಲ್ಲಿರುವ ಜಾತ್ಯತೀತ ಪ್ರಜಾಪ್ರಭುತ್ವ:ಭಾರತದಲ್ಲಿ ಸೌಕರ್ಯ ಯೋಜನೆಗಳ ವಸ್ತುನಿಷ್ಠ ಮೌಲ್ಯಮಾಪನ 'ಶೀರ್ಷಿಕೆಯ ವರದಿಯು,2015-16 ಮತ್ತು 2019-21ರಲ್ಲಿ ನಡೆಸಲಾಗಿದ್ದ ನಾಲ್ಕು ಮತ್ತು ಐದನೇ ಸುತ್ತುಗಳ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ ದತ್ತಾಂಶಗಳನ್ನು ವಿಶ್ಲೇಷಿಸಿದೆ.
ತಳಮಟ್ಟದ ಶೇ.20ರಷ್ಟು ಕುಟುಂಬಗಳ ಮೇಲೆ ಅಧ್ಯಯನವು ಗಮನವನ್ನು ಕೇಂದ್ರೀಕರಿಸಿತ್ತು ಮತ್ತು ಧರ್ಮದ ಆಧಾರದಲ್ಲಿ ಸ್ಪಷ್ಟ ಭೌಗೋಳಿಕತೆಗಳನ್ನು ರಚಿಸಲು 2011ರ ಜನಗಣತಿಯ ಅಂಕಿಸಂಖ್ಯೆಗಳನ್ನು ಬಳಸಿಕೊಂಡಿತ್ತು. 2015-16 ಮತ್ತು 2019-21ರಲ್ಲಿ 1.20 ಕೋ.ಗೂ ಅಧಿಕ ಕುಟುಂಬಗಳ ರಾಷ್ಟ್ರೀಯ ಪ್ರಾತಿನಿಧಿಕ ಮಾದರಿಯನ್ನು ಆಧರಿಸಿ ಸರಕಾರವು ಕೇವಲ ಒಂದು ಸಮುದಾಯ (ಹಿಂದು ಬಹುಸಂಖ್ಯಾಕ)ಕ್ಕಾಗಿ ಕೆಲಸ ಮಾಡಿದೆ ಮತ್ತು ಒಂದು ಧಾರ್ಮಿಕ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳನ್ನು ಆಧರಿಸಿ ಕುಟುಂಬಗಳ ನಡುವೆ ತಾರತಮ್ಯವೆಸಗಿದೆ ಎನ್ನಲು ಯಾವುದೇ ಪುರಾವೆ ಕಂಡು ಬಂದಿಲ್ಲ ಎಂದು ಪ್ರಬಂಧವು ಹೇಳಿದೆ.
ವಿದ್ಯುತ್, ಬ್ಯಾಂಕ್ ಖಾತೆ, ಮೊಬೈಲ್ಗಳು ಮತ್ತು ಶೌಚಾಲಯ ಸೌಕರ್ಯಗಳ ಕುರಿತಂತೆ ಎಲ್ಲ ಧರ್ಮಗಳು ಮತ್ತು ಗುಂಪುಗಳು ವ್ಯಾಪಕ ಲಾಭಗಳನ್ನು ಪಡೆದುಕೊಂಡಿವೆ. ವಾಸ್ತವದಲ್ಲಿ ಕೆಲವು ಸಂದರ್ಭಗಳಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಿಗಿಂತ ಹೆಚ್ಚಿನ ಲಾಭಗಳನ್ನು ಪಡೆದಿದ್ದಾರೆ ಎಂದು ಪ್ರಬಂಧವು ಹೇಳಿದೆಯಾದರೂ,ಮನೆಗಳಿಗೆ ಎಲ್ಪಿಜಿ ಮತ್ತು ನೀರಿನ ಸಂಪರ್ಕದಂತಹ ಸೌಲಭ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ವಿವಿಧ ಧರ್ಮಗಳು ಮತ್ತು ಸಾಮಾಜಿಕ ಗುಂಪುಗಳಿಗೆ ಸೇರಿದ ಶೇ.20ರಷ್ಟು ಬಡ ಕುಟುಂಬಗಳ ಏಳಿಗೆಗಾಗಿ ಸರಕಾರವು ಇನ್ನಷ್ಟು ಶ್ರಮಿಸುವುದು ಅಗತ್ಯವಾಗಿದೆ ಎಂದಿದೆ.
ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಪ್ರಬಂಧವು,2015-16ರಲ್ಲಿ ಶೇ.20ರಷ್ಟು ಅತ್ಯಂತ ಬಡ ಕುಟುಂಬಗಳ ಶೇ.74ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದವು ಮತ್ತು ಇದು 2019-21ರಲ್ಲಿ ಶೇ.93ಕ್ಕೆ ಏರಿಕೆಯಾಗಿದೆ ಎಂದು ಬೆಟ್ಟು ಮಾಡಿದೆ.
ಒಟ್ಟಾರೆಯಾಗಿ ಶೇ.73ರಷ್ಟು ಗಣನೀಯ ಗುರಿ ಸಾಧನೆಯಾಗಿದ್ದರೆ, ಧರ್ಮಗಳ ಪೈಕಿ ಮುಸ್ಲಿಮ್ ಸಮುದಾಯವು ಅಂದಾಜು ಶೇ.77ರಷ್ಟು ಗುರಿ ಸಾಧನೆಯೊಂದಿಗೆ ಅತ್ಯಂತ ಹೆಚ್ಚಿನ ಲಾಭವನ್ನು ಪಡೆದಿದೆ ಎಂದು ಪ್ರಬಂಧವು ತಿಳಿಸಿದೆ.
ವಿವಿಧ ಸಾಮಾಜಿಕ ಗುಂಪುಗಳ ಪೈಕಿ ಅತ್ಯಂತ ಹೆಚ್ಚಿನ ಗುರಿಸಾಧನೆ ಒಬಿಸಿ (ಶೇ.75) ಮತ್ತು ಎಸ್ಸಿ/ಎಸ್ಟಿ (ಶೇ.70ಕ್ಕೂ ಅಧಿಕ) ಸಮುದಾಯಗಳಲ್ಲಿ ಕಂಡುಬಂದಿದೆ. 2015-16ರಲ್ಲಿ ಶೇ.20ರಷ್ಟು ಅತ್ಯಂತ ಬಡ ಕುಟುಂಬಗಳ ಶೇ.53ರಷ್ಟು ಕುಟುಂಬಗಳು ವಿದ್ಯುತ್ ಸೌಲಭ್ಯವನ್ನು ಹೊಂದಿದ್ದವು ಮತ್ತು ಇದು 2019-21ರಲ್ಲಿ ಶೇ.85ಕ್ಕೆ ಏರಿಕೆಯಾಗಿದೆ ಎಂದಿರುವ ಪ್ರಬಂಧವು,ಎಲ್ಲ ಧಾರ್ಮಿಕ ಗುಂಪುಗಳಲ್ಲಿ ಗಣನೀಯ ಲಾಭಗಳನ್ನು ನಾವು ಗಮನಿಸಿದ್ದೇವಾದರೂ ಗುರಿಸಾಧನೆಯಲ್ಲಿ ಅತ್ಯಂತ ಗಣನೀಯ ಸುಧಾರಣೆಯು (ಶೇ.71) ಶೇ.20ರಷ್ಟು ಅತ್ಯಂತ ಬಡ ಮುಸ್ಲಿಮ್ ಕುಟುಂಬಗಳಲ್ಲಿ ಕಂಡು ಬಂದಿದೆ ಎಂದು ಒತ್ತಿ ಹೇಳಿದೆ.
ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಧಾರ್ಮಿಕ ಅಥವಾ ಸಾಮಾಜಿಕ ಗುಂಪುಗಳ ವಿರುದ್ಧ ತಾರತಮ್ಯದ ಯಾವುದೇ ಪುರಾವೆ ಕಂಡು ಬಂದಿಲ್ಲ ಮತ್ತು ಭಾರತದ ಪ್ರಜಾಪ್ರಭುತ್ವವು ಸದೃಢವಾಗಿದೆ ಎಂದು ಪ್ರತಿಪಾದಿಸಿರುವ ಪ್ರಬಂಧವು,ಎಲ್ಲರನ್ನೂ ಒಳಗೊಂಡ ಸಮಾಜವನ್ನು ಖಚಿತಪಡಿಸಲು ಸರಕಾರವು ಶೇ.20ರಷ್ಟು ಅತ್ಯಂತ ಬಡ ಕುಟುಂಬಗಳ ಏಳಿಗೆಯ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಬೇಕು ಎಂದು ತಿಳಿಸಿದೆ.