ಅಮೃತಸರ :ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಮುಂದೆ ಯುವತಿಯೋರ್ವಳನ್ನು ತಡೆದು ನಿಲ್ಲಿಸಿದ್ದು ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಯುವತಿಯೋರ್ವಳು ಮುಖದ ಮೇಲೆ ತ್ರಿವರ್ಣ ಟ್ಯಾಟೂವನ್ನು ಮುದ್ರಿಸಿದ್ದರಿಂದ ದೇವಸ್ಥಾನಕ್ಕೆ ಪ್ರವೇಶ ನೀಡಲಿಲ್ಲ. ಈ ಸಂಪೂರ್ಣ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಶುರುವಾಗಿದ್ದು ಪರ ವಿರೋಧ ಚರ್ಚೆಯಾಗುತ್ತಿದೆ.
ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್, ಈ ಇಡೀ ವಿಷಯದ ಬಗ್ಗೆ ಯುವತಿಯ ಜೊತೆ ಯಾವುದೇ ರೀತಿಯ ಅನುಚಿತ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಯುವತಿಯ ಮುಖದ ಮೇಲೆ ಚಿತ್ರಿಸಿದ್ದ ಧ್ವಜ ತ್ರಿವರ್ಣ ಧ್ವಜವಲ್ಲ ಎಂದೂ ಹೇಳಿದ್ದಾರೆ.
'ಇದು ಸಿಖ್ ತೀರ್ಥಯಾತ್ರೆ. ಪ್ರತಿಯೊಂದು ಧಾರ್ಮಿಕ ಸ್ಥಳಕ್ಕೂ ತನ್ನದೇ ಆದ ಮಿತಿಗಳಿವೆ. ನಾವು ಎಲ್ಲರಿಗೂ ಸ್ವಾಗತಿಸುತ್ತೇವೆ. ಯಾವುದೇ ಅಧಿಕಾರಿ ಅನುಚಿತವಾಗಿ ವರ್ತಿಸಿದ್ದರೆ ಕ್ಷಮೆಯಾಚಿಸುತ್ತೇವೆ. ಹುಡುಗಿಯ ಮುಖದಲ್ಲಿರುವ ಧ್ವಜ ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ ಏಕೆಂದರೆ ಅದರಲ್ಲಿ ಅಶೋಕ ಚಕ್ರ ಇರಲಿಲ್ಲ. ಇದು ಪಕ್ಷದ ರಾಜಕೀಯ ಬಾವುಟವಾಗಿರಬಹುದು ಎಂದು ಗ್ರೆವಾಲ್ ಹೇಳಿದ್ದಾರೆ.
ಯುವತಿಯೋರ್ವಳನ್ನು ಗೋಲ್ಡನ್ ಟೆಂಪಲ್ ಪ್ರವೇಶಿಸದಂತೆ ತಡೆಯಲಾಗಿತ್ತು. ವಿಡಿಯೋದಲ್ಲಿ ಗೋಲ್ಡನ್ ಟೆಂಪಲ್ ಸಿಬ್ಬಂದಿ ಹಾಗೂ ಯುವತಿಯ ಜೊತೆಗಿದ್ದವರ ನಡುವೆ ವಾಗ್ವಾದ ನಡೆದಿತ್ತು. ಯುವತಿ ಇದು ಭಾರತವಲ್ಲವೇ... ಈ ಪ್ರಶ್ನೆಗೆ ಅಧಿಕಾರಿಯು ಇದು ಪಂಜಾಬ್ ಎಂದು ಹೇಳುತ್ತಾರೆ. ಇದಾದ ನಂತರ ಯುವತಿಯ ಜೊತೆಗಿದ್ದ ವ್ಯಕ್ತಿ ಪಂಜಾಬ್ ಭಾರತದಲ್ಲಿಲ್ಲವೇ ಎಂದು ಕೇಳುತ್ತಾರೆ. ಇದಾದ ನಂತರ ಅವರ ಮಧ್ಯೆ ವಾಗ್ವಾದ ನಡೆದಿತ್ತು.