ನವದೆಹಲಿ: ಕೇಂದ್ರ ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಅವರು ಆರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನಾ ವಿರೋಧಿಸಿದೆ.
ಎರಡು ದಿನಗಳ ಭೇಟಿಗಾಗಿ ಆರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಅಮಿತ್ ಶಾ ಅವರು ಸೋಮವಾರ ಚೀನಾ ಗಡಿ ಪ್ರದೇಶದ ಕಿಬಿಥೂ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಅಮಿತ್ ಶಾ ಅವರು ಭೇಟಿ ನೀಡಿರುವುದಕ್ಕೆ ಚೀನಾ ಬಲವಾಗಿ ವಿರೋಧ ವ್ಯಕ್ತಪಡಿಸಿದೆ. ಅಮಿತ್ ಶಾ ಅವರು ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಿರುವುದು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ತಿಳಿಸಿದ್ದಾರೆ.
ಝಂಗ್ನಾನ್ ಚೀನಾದ ಪ್ರದೇಶವಾಗಿದ್ದು ಭಾರತೀಯ ಅಧಿಕಾರಿಗಳು, ಸಚಿವರ ಭೇಟಿಯು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ. ಇದು ಗಡಿ ಪರಿಸ್ಥಿತಿಯ ಶಾಂತಿ ಮತ್ತು ನೆಮ್ಮದಿ ಕದಡುವ ಸಾಧ್ಯತೆ ಇದೆ ಎಂದು ವಾಂಗ್ ವೆನ್‌ಬಿನ್ ಹೇಳಿದ್ದಾರೆ.
ಗಡಿ ರಾಜ್ಯಗಳಲ್ಲಿ ರಸ್ತೆ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರ ₹ 4,800 ಕೋಟಿ ತೆಗೆದಿರಿಸಿದ್ದು, ಅದರ ಭಾಗವಾಗಿ ಗಡಿ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗೆ ಸಚಿವರು ಚಾಲನೆ ನೀಡಿದ್ದಾರೆ. ಈ ಯೋಜನೆಯಂತೆ ಉತ್ತರ ಭಾರತದ 19 ಜಿಲ್ಲೆಗಳ 2,967 ಹಳ್ಳಿಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ.
'ಗೋಲ್ಡನ್ ಜ್ಯುಬಿಲಿ ಬಾರ್ಡರ್ ಇಲ್ಯುಮಿನೇಷನ್ ಪ್ರೋಗ್ರಾಂ' ಯೋಜನೆಯಡಿಯಲ್ಲಿ ನಿರ್ಮಿಸಲಾದ ಒಂಬತ್ತು ಕಿರು ಜಲವಿದ್ಯುತ್ ಯೋಜನೆಗಳನ್ನೂ ಅಮಿತ್ ಶಾ ಸೋಮವಾರ ಮತ್ತು ಮಂಗಳವಾರ ಉದ್ಘಾಟನೆ ಮಾಡುವರು.