ಭೋಪಾಲ್: 'ನನ್ನ ವರ್ಚಸ್ಸನ್ನು ಹಾಳುಮಾಡುವ ಸಲುವಾಗಿ ಕೆಲವರು ದೇಶದ ಒಳಗೆ ಮತ್ತು ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ ಹಾಗೂ ಇದಕ್ಕಾಗಿ ಕೆಲವರಿಗೆ ಸುಪಾರಿಯನ್ನೂ ನೀಡಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಆರೋಪಿಸಿದ್ದಾರೆ.
ಇಲ್ಲಿನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಭೋಪಾಲ್- ದೆಹಲಿ ಮಾರ್ಗದ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಈ ಹಿಂದಿದ್ದ ಸರ್ಕಾರಗಳು ವೋಟ್ ಬ್ಯಾಂಕ್ ಓಲೈಕೆಯಲ್ಲಿ ನಿರತವಾಗಿದ್ದವು. ಆದರೆ, ನಾವು ಜನರನ್ನು ಸಂತೃಪ್ತಗೊಳಿಸಲು ನಿರತವಾಗಿದ್ದೇವೆ' ಎಂದರು.
'ಅಂದಿನ ಸರ್ಕಾರಗಳು ಒಂದೇ ಕುಟುಂಬವನ್ನು ದೇಶದ ಮೊದಲ ಕುಟುಂಬವೆಂದು ಪರಿಗಣಿಸಿವೆ. ಆದರೆ, ಬಡ ಮತ್ತು ಮಧ್ಯಮ ವರ್ಗವನ್ನು ಕಡೆಗಣಿಸಿವೆ. ರೈಲ್ವೆಯು ಇದಕ್ಕೆ ಜೀವಂತ ಉದಾಹರಣೆಯಾಗಿದೆ' ಎಂದೂ ಅವರು ಹೇಳಿದ್ದಾರೆ.