ನವದೆಹಲಿ (PTI): ಪ್ರಸ್ತುತ ಚಾಲ್ತಿಯಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳ ಪರಿಮಿತಿಯಲ್ಲಿಯೇ, ವಾಸ್ತವ ಗಡಿರೇಖೆಯಲ್ಲಿ (ಎಲ್‌ಎಸಿ) ಶಾಂತಿ ಸ್ಥಾಪಿಸುವ, ಭಾರತ ಮತ್ತು ಚೀನಾ ನಡುವಿನ ಗಡಿವಿವಾದ ಬಗೆಹರಿಸುವ ಪ್ರಕ್ರಿಯೆ ನಡೆಯಬೇಕು ಎಂದು ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ.
ಚೀನಾದ ರಕ್ಷಣಾ ಸಚಿವ ಲೀ ಶಾಂಗ್‌ಫು ಜೊತೆಗೆ ಗುರುವಾರ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಅಂಶವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. 'ಭಾರತ-ಚೀನಾ ಬಾಂಧವ್ಯ ವೃದ್ಧಿಯು ಗಡಿಯಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಯನ್ನು ಅವಲಂಬಿಸಿದೆ' ಎಂದೂ ಹೇಳಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆಯ (ಎಲ್‌ಎಸಿ) ಬಳಿ ನಡೆದಿದ್ದ ಸೇನಾ ಸಂಘರ್ಷದ ಬಳಿಕ ಮೂರು ವರ್ಷಗಳಿಂದ ಬಿಗುವಿನ ಸ್ಥಿತಿ ಇದೆ. ಈ ಮಧ್ಯೆಯೇ ಚೀನಾದ ರಕ್ಷಣಾ ಸಚಿವರ ಜೊತೆಗೆ ದ್ವಿಪಕ್ಷೀಯ ಚರ್ಚೆ ನಡೆಯಿತು. ಭಾರತ ಆತಿಥ್ಯ ವಹಿಸಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಪಾಲ್ಗೊಳ್ಳಲು ಚೀನಾದ ರಕ್ಷಣಾ ಸಚಿವರು ಆಗಮಿಸಿದ್ದಾರೆ.
ಪೂರ್ವಲಡಾಖ್‌ನಲ್ಲಿ ವಾಸ್ತವ ಗಡಿರೇಖೆಯಲ್ಲಿ ಚೀನಾ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿರುವುದು, ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದ ಪೂರ್ಣ ಅಡಿಪಾಯವನ್ನೇ ಅಲುಗಾಡಿಸಿದೆ ಎಂದು ಸಚಿವ ರಾಜನಾಥ್ ಸಿಂಗ್ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಉಭಯ ರಕ್ಷಣಾ ಸಚಿವರ ಭೇಟಿ ಕುರಿತು ಹೇಳಿಕೆಯನ್ನು ನೀಡಿರುವ ರಕ್ಷಣಾ ಸಚಿವಾಲಯವು, 'ಗಡಿಯಲ್ಲಿನ ಬೆಳವಣಿಗೆಗಳು ಹಾಗೂ ದ್ವಿಪಕ್ಷೀಯ ಬಾಂಧವ್ಯ ಕುರಿತಾಗಿ ಉಭಯ ದೇಶಗಳ ರಕ್ಷಣಾ ಸಚಿವರು ಮುಕ್ತವಾಗಿ ಚರ್ಚಿಸಿದರು' ಎಂದು ತಿಳಿಸಿದೆ.
'ಭಾರತ ಮತ್ತು ಚೀನಾ ಬಾಂಧವ್ಯ ಬಲಗೊಳ್ಳುವುದು ಗಡಿಯಲ್ಲಿ ಶಾಂತಿ ಸ್ಥಾಪನೆಯನ್ನು ಅವಲಂಬಿಸಿದೆ. ಗಡಿ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿವಾದಗಳು ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿಯೇ ನಡೆಯಬೇಕು ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದ್ದಾರೆ' ಎಂದು ತಿಳಿಸಿದೆ.
ಮೂರು ವರ್ಷದ ಹಿಂದೆ ಪೂರ್ವ ಲಡಾಖ್ ಬಳಿ ಉಭಯ ದೇಶಗಳ ನಡುವೆ ನಡೆದ ಸಂಘರ್ಷದ ಬಳಿಕ, ಚೀನಾದ ರಕ್ಷಣಾ ಸಚಿವರ ಪ್ರಥಮ ಭೇಟಿ ಇದಾಗಿದೆ. ಗಡಿವಿವಾದ ಇತ್ಯರ್ಥಕ್ಕೆ ಸೇನಾ ಹಂತದಲ್ಲಿ ಚರ್ಚೆಗಳು ನಡೆದಿವೆ. 18ನೇ ಸುತ್ತಿನ ಸಭೆಯ ಏ.23ರಂದು ನಡೆದಿತ್ತು.
ಕಮಾಂಡರ್‌ಗಳ ಹಂತದಲ್ಲಿ 23ರಂದು ನಡೆದಿದ್ದ ಸಭೆಯಲ್ಲಿ ಗಡಿ ವಿವಾದ ಇತ್ಯರ್ಥಕ್ಕೆ ಪರಸ್ಪರ ಸ್ವೀಕೃತವಾಗುವ ಪರಿಹಾರ ಕಂಡುಕೊಳ್ಳಲು ಪರಸ್ಪರ ಸಂಪರ್ಕದಲ್ಲಿ ಇರಬೇಕು ಹಾಗೂ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿರ್ಧರಿಸಲಾಗಿತ್ತು.