ಪೆರ್ಲ: ಗ್ರಂಥಾಲಯವು ನಿರಂತರ ಕಲಿಕೆಯ ಕೇಂದ್ರವಾಗಿದ್ದು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕೇರಳ ಗ್ರಂಥಾಲಯ ರಾಜ್ಯ ಸಮಿತಿಯ ಸದಸ್ಯ ಅಹಮದ್ ಹುಸೈನ್ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಲ್ಕ ಬಿರ್ಮೂಲೆಯ ಅಕ್ಷಯ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡ ಮತ್ತು ಅಕ್ಷಯ ಯುವಕ ಮಂಡಲದ ವಾರ್ಷಿಕೋತ್ಸವ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪುಸ್ತಕ ಓದುವ ಹವ್ಯಾಸದ ಮಹತ್ವವನ್ನು ಅವರು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅವರು ಮಾತನಾಡಿ ಎಲ್ಲರ ಸಹಕಾರದಿಂದ ಗ್ರಂಥಾಲಯ ನಾಡಿನ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸಿದರು. ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಶಂಕರ ರೈ ಮಾಸ್ತರ್ ಮಾತನಾಡಿ ಊರಿನ ಏಳಿಗೆಯಲ್ಲಿ ಸರ್ವರ ಪಾತ್ರ ಇರಲಿ ಎಂದರು.
ಗ್ರಂಥಾಲಯ ಸಮಿತಿಯ ಸದಸ್ಯ, ಶಿಕ್ಷಕ, ರಂಗಕರ್ಮಿ ಉದಯ ಸಾರಂಗ್, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ, ಗ್ರಾಮ ಪಂಚಾಯಿತಿಯ ಸದಸ್ಯೆ ಆಶಾಲತ ಶುಭ ಹಾರೈಸಿದರು. ಈ ಸಂದರ್ಭ ರಾಷ್ಟ್ರ ಮಟ್ಟದಲ್ಲಿ ಡಿಸ್ಕಸ್ ತ್ರೋ ಸ್ಪರ್ಧೆಯ ಕಂಚಿನ ಪದಕ ವಿಜೇತ ಕ್ರೀಡಾಪಟು ರಾಜೇಶ ಕುಮಾರ್ ಬನಾರಿಮೂಲೆ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಶ್ರೀಧರ ಭಟ್ ಬೀಡುಬೈಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕ ಮಂಡಲ ಹಾಗೂ ಗ್ರಂಥಾಲಯದ ಸಾಧನೆ ವಿವರಿಸಿದರು. ಯುವಕ ಮಂಡಲದ ಅಧ್ಯಕ್ಷ ನಾರಾಯಣ ನಾಯ್ಕ, ಹಿರಿಯರಾದ ಕೃಷ್ಣ ಮೂಲ್ಯ ಖಂಡಿಗೆ, ಗ್ರಂಥಾಲಯದ ಅಧ್ಯಕ್ಷೆ ಪದ್ಮಲತಾ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸದಾನಂದ ಸಂಘಟನಾ ವರದಿ ಮಂಡಿಸಿದರು. ಸದಸ್ಯ ಈಶ್ವರ ಕುಲಾಲ್ ವಂದಿಸಿದರು. ಶಿಕ್ಷಕ ಹರ್ಷಿತ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಮಂಜೇಶ್ವರದ ಶಾರದಾ ಆಟ್ರ್ಸ್ ಅವರಿಂದ "ಮಲ್ಲ ಸಂಗತಿಯೇ ಅತ್ತ್ " ತುಳು ನಾಟಕ, ನಲ್ಕ ವಾಗ್ದೇವಿ ಯಕ್ಷಗಾನ ಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ "ಮಹಿಷವಧೆ-ಶಾಂಭವಿ ವಿಜಯ" ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.