ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ 2023 ಎಪ್ರಿಲ್ 6ರಂದು ಜಾರಿಗೊಳಿಸಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಹಾಗೂ ಡಿಜಿಟಲ್ ಮಾಧ್ಯಮದ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು-2023 (ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮ-2023)ರಿಂದ ತೀವ್ರ ವಿಚಲಿತವಾಗಿರುವುದಾಗಿ 'ದಿ ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ' (ಐಎನ್‌ಎಸ್) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಹೊಸದಾಗಿ ಅಧಿಸೂಚಿಸಲಾದ ನಿಯಮಗಳ ಪ್ರಕಾರ ಸಚಿವಾಲಯ ಕೇಂದ್ರ ಸರಕಾರದ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ನಕಲಿ ಅಥವಾ ಸುಳ್ಳು ಅಥವಾ ತಪ್ಪು ದಾರಿಗೆಳೆಯುತ್ತದೆ ಎಂದು ನಿರ್ಧರಿಸುವ ವ್ಯಾಪಕ ಅಧಿಕಾರ ಹೊಂದಿರುವ ಸತ್ಯ ಪರಿಶೀಲನಾ ಘಟಕವನ್ನು ಸ್ಥಾಪಿಸುವ ಮೂಲಕ ಅಧಿಕಾರವನ್ನು ಅನುಭವಿಸಲಿದೆ.
ಈ ಸತ್ಯ ಪರಿಶೀಲನಾ ಘಟಕ ಸಾಮಾಜಿಕ ಮಾಧ್ಯಮ, ಇಂಟರ್ನೆಟ್ ಸೇವಾ ಪೂರೈಕೆದಾರರು ಹಾಗೂ ಇತರ ಸೇವಾ ಪೂರೈಕೆದಾರರು ಸೇರಿದಂತೆ ಮಧ್ಯವರ್ತಿಗಳಿಗೆ ಅಂತಹ ವಿಷಯಗಳನ್ನು ಪ್ರಕಟಿಸದಂತೆ, ಪ್ರಕಟಿಸಿದರೂ ಹಿಂದೆ ತೆಗೆಯುವಂತೆ ಸೂಚನೆ ನೀಡುವ ಅಧಿಕಾರವನ್ನು ಹೊಂದಲಿದೆ.
ಈ ಅಧಿಸೂಚನೆಯನ್ನು ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿರುವ ಐಎನ್‌ಎಸ್, ಮಾಧ್ಯಮ ವೃತ್ತಿ ಮತ್ತು ಅದರ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪರಿಣಾಮ ಬೀರುವ ಯಾವುದೇ ಅಧಿಸೂಚನೆಯನ್ನು ಜಾರಿಗೊಳಿಸುವ ಮೊದಲು ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಿಕಾ ಸಂಸ್ಥೆಗಳಂತಹ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಹಾಗೂ ಅರ್ಥಪೂರ್ಣ ಚರ್ಚೆಗಳನ್ನು ನಡೆಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಹೇಳಿಕೆಯಲ್ಲಿ ಸರಕಾರದ ಸತ್ಯ ಪರಿಶೀಲನೆ ನಿಯಮವನ್ನು ಖಂಡಿಸಿರುವ ಐಎನ್‌ಎಸ್, ಇದು ಸಂಬಂಧಿಸಿದವರನ್ನು ಆಲಿಸದೆ ನಡೆಯುವುದರಿಂದ ಹಾಗೂ ಸಹಜ ನ್ಯಾಯದ ಎಲ್ಲ ತತ್ವವನ್ನು ಉಲ್ಲಂಘಿಸುವುದರಿಂದ ಇಂತಹ ಅಧಿಕಾರ ನಿರಂಕುಶವಾಗಿ ಕಂಡು ಬರುತ್ತದೆ ಹಾಗೂ ದೂರುದಾರನೇ ನ್ಯಾಯಾಧೀಶನಂತೆ ವರ್ತಿಸುವ ಪರಿಣಾಮವನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.