ಗುರುಗ್ರಾಮ : ಇಲ್ಲಿನ ರಸ್ತೆ ಬದಿಯ ಮ್ಯಾನ್‌ಹೋಲ್‌ನಿಂದ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ವಾಟಿಕಾ ಚೌಕ್‌ನ ಬಳಿ ಬಾದಶಹಪುರದ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಮ್ಯಾನ್‌ಹೋಲ್ ತೆರೆದಿದೆ.ಅದರಿಂದ ದುರ್ವಾಸನೆ ಬರುತ್ತಿದೆ ಎಂಬ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.
ಈ ಸಂದರ್ಭ ಪೊಲೀಸರಿಗೆ ಒಳಗಡೆ ಮೃತ ದೇಹವಿರುವುದು ತಿಳಿದುಬಂದಿದೆ. ಬಳಿಕ ಅಗ್ನಿಶಾಮಕ ದಳ ಹಾಗೂ ಜೆಸಿಬಿ ಯಂತ್ರದ ನೆರವಿನಿಂದ 10 ಅಡಿ ಆಳಕ್ಕೆ ಬಿದ್ದ ಮೃತ ದೇಹವನ್ನು ಮ್ಯಾನ್‌ಹೋಲ್‌ನಿಂದ ಎತ್ತಲಾಗಿದೆ. ಈ ಕಾರ್ಯಾಚರಣೆಗೆ ಮೂರು ತಾಸು ಬೇಕಾಯಿತು.
'ಶವ ಕೊಳೆತ ಸ್ಥಿತಿಯಲ್ಲಿದ್ದರೂ ಮೃತನ ಕೈಯಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ಪತ್ತೆಯಾಗಿದೆ. ಇದರೊಳಗೆ ಲ್ಯಾಪ್‌ಟಾಪ್ ಹೊರತುಪಡಿಸಿ ಮೊಬೈಲ್, ಪವರ್ ಬ್ಯಾಂಕ್ ಪತ್ತೆಯಾಗಿವೆ. ಬ್ಯಾಗ್‌ನಲ್ಲಿ ಸಿಕ್ಕ ದಾಖಲೆಗಳ ಪ್ರಕಾರ ಮೃತರು, ಉತ್ತರ ಪ್ರದೇಶದ ಮೂಲದವರಾದ ದಿನೇಶ್ ಕುಮಾರ್ ಇರಬಹುದು. ಸುಮಾರು 30 ವರ್ಷದ ಆಸುಪಾಸಿನವರಿರಬಹುದು ಎಂದು ತಿಳಿದುಬಂದಿದೆ' ಎಂದು ಬಾದಶಹಪುರದ ಠಾಣೆಯ ಇನ್‌ಸ್ಪೆಕ್ಟರ್ ಮದನ್ ಲಾಲ್ ಹೇಳಿದರು.
'ನಿಖರವಾಗಿ ಮೃತನ ಗುರುತು ಪತ್ತೆಯಾದರೆ ಮಾತ್ರ ಎಫ್‌ಐಆರ್ ದಾಖಲಿಸಲಾಗುವುದು' ಎಂದೂ ಅವರು ತಿಳಿಸಿದರು.