ನವದೆಹಲಿ: 'ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ಸಂಸತ್ತಿನ ಸದಸ್ಯರಿಗೆ ಸಿವಿಲ್ ಹಾಗೂ ಕ್ರಿಮಿನಲ್ ಕ್ರಮಗಳಿಂದ ಸಿಗುವ 'ವಿನಾಯಿತಿ'ಯನ್ನು ಸದಸ್ಯರು ಬಹಳ ಎಚ್ಚರಿಕೆ ಹಾಗೂ ಜವಾಬ್ದಾರಿಯುತವಾಗಿ ಚಲಾಯಿಸಬೇಕು' ಎಂದು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎತ್ತಿದ್ದ ಕ್ರಿಯಾಲೋಪವನ್ನು ತಿರಸ್ಕರಿಸಿ ಬುಧವಾರ ನಿರ್ಣಯ ಪ್ರಕಟಿಸಿದರು.
ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ 'ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದ ಕುರಿತು, ಸಭಾನಾಯಕ ಪೀಯೂಷ್ ಗೋಯಲ್ ಅವರು, 'ರಾಹುಲ್ ಗಾಂಧಿ ಅವರು ವಿದೇಶದಲ್ಲಿ ನಿಂತು ಭಾರತವನ್ನು ಅವಮಾನಿಸಿದ್ದಾರೆ. ಭಾರತದ ಸಂಸತ್ತನ್ನು ಅಪಮಾನಿಸಿದ್ದಾರೆ. ಆದ್ದರಿಂದ ಅವರು ರಾಜ್ಯಸಭೆಗೆ ಬಂದು, ಕ್ಷಮೆ ಕೇಳಬೇಕು' ಎಂದು ಒತ್ತಾಯಿಸಿದ್ದರು. ಈ ಹೇಳಿಕೆಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಮಾರ್ಚ್ 13ರಂದು ಕ್ರಿಯಾಲೋಪ ಎತ್ತಿದ್ದರು.
'ಸಂಸದರಿಗೆ ಸಿಗುವ ವಿನಾಯಿತಿಯನ್ನು ಬಹಳ ಜತನದಿಂದ ಬಳಸಿಕೊಳ್ಳಬೇಕೇ ಹೊರತು ಅಜಾಗರೂಕರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಬಹಳಸಿಕೊಳ್ಳಬಾರದು. ಜೊತೆಗೆ ತಪ್ಪು ಮಾಹಿತಿಗಳನ್ನು ನೀಡುವುದು, ಪ್ರಚೋದನಕಾರಿಯಾಗಿ ಮಾತನಾಡಿ, ವಿನಾಶಕಾರಿ ಸಂಕಥನಗಳನ್ನು ಹುಟ್ಟುಹಾಕುವುದು ಗಂಭೀರ ಪರಿಣಾಮಗಳನ್ನು ತಂದೊಡ್ಡುತ್ತದೆ' ಎಂದು ಸಭಾಪತಿ ಧನಕರ್ ಅವರು ಹೇಳಿದರು.
'ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎನ್ನುವ ಕಾರಣಕ್ಕೆ ಅವಾಸ್ತವವಾದ ಸತ್ಯಗಳ ಮೇಲೆ ಒಪ್ಪಲಾಗದ ಆರೋಪಗಳನ್ನು ಮಾಡುವುದು, ಸಂಸತ್ತನ್ನು ಅಪಮೌಲ್ಯಗೊಳಿಸುವುದು, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಳಂಕ ಹೊರಿಸುವುದು ಸಂಸತ್ತಿನ ಪಾವಿತ್ರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ' ಎಂದರು.
'ಯಾವುದೇ ವಿಷಯ ಅಥವಾ ಯಾರೇ ವ್ಯಕ್ತಿಯು ರಾಜ್ಯಸಭೆಯ ವ್ಯಾಪ್ತಿಗಿಂತ ದೊಡ್ಡವರಲ್ಲ' ಎಂದೂ ಹೇಳಿದರು. ಸಭಾಪತಿ ಅವರ ನಿರ್ಣಯದ ವಿರುದ್ಧ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಈ ನಡುವೆಯೇ ಸಭಾಪತಿ ಧನಕರ್ ಅವರು ಒಂದು ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಿದರು.
ಇದಕ್ಕೂ ಮೊದಲು, ಬೆಳಿಗ್ಗೆ ಸದನ ಆರಂಭಗೊಂಡ ಬಳಿಕ ಅದಾನಿ ಸಂಸ್ಥೆ ಅಕ್ರಮ ನಡೆಸಿದೆ ಎಂಬ ಆರೋಪದ ಬಗ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ ಎನ್ನಲಾದ 'ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಹೇಳಿಕೆಯ ಕುರಿತು ಕ್ಷಮೆ ಕೇಳಬೇಕು ಎನ್ನುವ ಸಂಬಂಧ ರಾಜ್ಯಸಭೆಯಲ್ಲಿ ಗದ್ದಲ ನಡೆಯಿತು. ಈ ಮಧ್ಯೆಯೇ ಸಾರ್ವಜನಿಕ ಲೆಕ್ಕ ಸಮಿತಿ ವರದಿಯನ್ನು (2022-23) ಬಿಜೆಪಿಯ ಭುಬನೇಶ್ವರ್ ಕಲೀತಾ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು.
ಸದನದ ಸಂಪ್ರದಾಯ ಪಾಲಿಸಿ: ಖರ್ಗೆ
'ಒಂದು ಸದನದ ಸದಸ್ಯನು ತನಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎನ್ನುವ ಕಾರಣಕ್ಕೆ ಮತ್ತೊಂದು ಸದನದ ಸದಸ್ಯನ ವಿರುದ್ಧ ಆರೋಪಗಳನ್ನು ಮಾಡಲು ಸದನವನ್ನು ಬಳಸಿಕೊಳ್ಳಬಾರದು' ಎಂದು ವಿ.ವಿ. ಗಿರಿ ಅವರು 1967ರ ಜೂನ್ 19ರಂದು ನಿರ್ಣಯ ನೀಡಿದ್ದರು. ಜೊತೆಗೆ, 'ಮತ್ತೊಂದು ಸದನದ ಸದಸ್ಯನನ್ನು ಉಲ್ಲೇಖಿಸುವ ಮೊದಲು ಬಹಳ ಎಚ್ಚರಿಕೆ ವಹಿಸಬೇಕು' ಎಂದು ಎಲ್.ಕೆ. ಆಡ್ವಾಣಿ ಅವರ ಪರವಾಗಿ 1983ರ ಮಾರ್ಚ್ 17ರಂದು ಉಪಸಭಾಪತಿ ಅವರು ನಿರ್ಣಯ ನೀಡಿದ್ದರು. ಈ ನಿರ್ಣಯಗಳನ್ನು ಉಲ್ಲೇಖಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಕ್ರಿಯಾಲೋಪವನ್ನು ಎತ್ತಿದ್ದರು.
ಸಭಾಪತಿ ನಿರ್ಣಯ: ಕಾಂಗ್ರೆಸ್ ವಿರೋಧ
ಸ್ಪೀಕರ್ ಅಥವಾ ಸಭಾಪತಿ ಯಾರೇ ಆಗಲಿ ಆಡಳಿತ ಪಕ್ಷಕ್ಕೆ ಅವರಿಗೆ ಇರುವ ನಿಷ್ಠಯನ್ನು ತೋರ್ಪಡಿಸದೇ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಖರ್ಗೆ ಅವರು ಎತ್ತಿದ ಕ್ರಿಯಾಲೋಪವನ್ನು ತಿರಸ್ಕರಿಸಿದ ಸಭಾಪತಿ ಜಗದೀಪ್ ಧನಕರ್ ಅವರ ವಿರುದ್ಧ ಅವರು ವಾಗ್ದಾಳಿ ನಡಿಸಿದರು.
ರಾಜ್ಯಸಭೆಯ ಸದಸ್ಯನಾಗಿರದ ವ್ಯಕ್ತಿಯನ್ನು ರಾಜ್ಯಸಭೆಗೆ ಕರೆಸುವುದು ಸಾಧ್ಯವಿಲ್ಲ. ಲೋಕಸಭೆ ಸದಸ್ಯನ ಕುರಿತ ಚರ್ಚೆ ಹಾಗೂ ಅಲ್ಲಿನ ವಿಷಯಗಳ ಚರ್ಚೆಯನ್ನು ರಾಜ್ಯಸಭೆಯಲ್ಲಿ ಮಾಡುವಂತಿಲ್ಲ ಎನ್ನುವ ವಾದವನ್ನು ಕಾಂಗ್ರೆಸ್ ಮತ್ತೊಮ್ಮೆ ಮುಂದಿಟ್ಟಿದೆ.
ಲೋಕಸಭೆಯಲ್ಲೂ ಗದ್ದಲ
ಅದಾನಿ ಸಂಸ್ಥೆಯ ಅವ್ಯವಹಾರಗಳನ್ನು ಜಂಟಿ ಸದನ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರಿಸಿದವು. ಈ ಕಾರಣಕ್ಕಾಗಿ ಒಂದು ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.
ಕಪ್ಪು ಬಟ್ಟೆ ಧರಿಸಿ ಲೋಕಸಭೆಗೆ ಬಂದಿದ್ದ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಎದುರು ಪ್ರತಿಭಟನೆ ನಡೆಸಿದರು. ಗದ್ದಲದ ನಡುವೆಯೇ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ ಅವರು 'ಕರಾವಳಿ ಮೀನುಗಾರಿಕಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ- 2023'ಅನ್ನು ಮಂಡಿಸಿದರು.
ಬೆಳಿಗ್ಗೆ ಕಲಾಪ ಆರಂಭಗೊಂಡ ಬಳಿಕ ಪತ್ರಿಭಟನೆಯ ಕಾರಣಕ್ಕೆ ಮಧ್ಯಾಹ್ನ 2 ಗಂಟೆಯ ವರೆಗೆ ಕಲಾಪವನ್ನು ಮುಂದೂಡಲಾಯಿತು. 2 ಗಂಟೆಯ ನಂತರವೂ ಪ್ರತಿಭಟನೆಗಳು ಮುಂದುವರಿದಾಗ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.