ನವದೆಹಲಿ: 'ಕೇಂದ್ರ ಸಚಿವ ಸಂಪುಟವು ಸಿನಿಮಾಟೊಗ್ರಾಫ್ (ತಿದ್ದುಪಡಿ) ಮಸೂದೆ-2023ಕ್ಕೆ ಬುಧವಾರ ಅನುಮೋದನೆ ನೀಡಿದೆ. ಚಲನಚಿತ್ರಗಳ ಪೈರಸಿ ಹಾಗೂ ಆ ಚಿತ್ರಗಳ ತುಣುಕುಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಲು ಅಗತ್ಯವಿರುವ ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿದೆ' ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, 'ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ' ಎಂದಿದ್ದಾರೆ.
'ಸಿನಿಮಾಗಳಿಗೆ 'ಯು', 'ಎ' ಹಾಗೂ 'ಯುಎ' ಪ್ರಮಾಣ ಪತ್ರಗಳನ್ನು ನೀಡುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ. ಇದರ ಬದಲು ವಯೋಮಾನದ ಆಧಾರದಲ್ಲಿ ಸಿನಿಮಾಗಳನ್ನು ವರ್ಗೀಕರಿಸುವ ಪದ್ಧತಿಯನ್ನು ಈ ಮಸೂದೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಸಿನಿಮಾ ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿ ಈ ಮಸೂದೆ ರೂಪಿಸಲಾಗಿದೆ. ಇದಕ್ಕೂ ಮುನ್ನ ಎಲ್ಲಾ ವರ್ಗದವರ ಅಭಿಪ್ರಾಯಗಳನ್ನೂ ಆಲಿಸಲಾಗಿದೆ' ಎಂದು ಹೇಳಿದ್ದಾರೆ.
'ಈ ಮಸೂದೆಯನ್ನು ಎಲ್ಲರೂ ಸ್ವಾಗತಿಸಲಿದ್ದಾರೆ. ಇದು ಯಾವ ಬಗೆಯ ವಿವಾದಕ್ಕೂ ದಾರಿ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ಇದೆ. ಪೈರಸಿಗೆ ಕಡಿವಾಣ ಹಾಕಬೇಕೆಂಬುದು ಎಲ್ಲರ ಬೇಡಿಕೆಯಾಗಿತ್ತು' ಎಂದು ತಿಳಿಸಿದ್ದಾರೆ.