ಆದರೆ, 2016ರಲ್ಲಿ ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಿದ್ದ ಪ್ರಮಾಣ ಪತ್ರ ಇದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಮೋದಿಯವರ ವಿದ್ಯಾರ್ಹತೆಯ ಬಗ್ಗೆ ಯಾಕೆ ಇಷ್ಟೊಂದು ಗಲಾಟೆ? ಆರು ವರ್ಷಗಳ ಹಿಂದೆ ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ನಡೆಸಿ, ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಪ್ರದರ್ಶಿಸಿದ್ದರು. ಅದನ್ನು ಸುದ್ದಿ ಸಂಸ್ಥೆ ಎಎನ್‌ಐ ಪ್ರಕಟಿಸಿತ್ತು ಎಂದು ಭಾವಿಸುತ್ತೇನೆ' ಎಂಬ ಒಕ್ಕಣೆಯನ್ನೂ ತಮ್ಮ ಟ್ವೀಟ್‌ನಲ್ಲಿ ಸ್ವಾಮಿ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಮತ್ತು ಎಂಎ ಪದವಿ ಪ್ರಮಾಣ ಪತ್ರಗಳನ್ನು 2016 ರಲ್ಲಿ ಬಿಜೆಪಿ ಬಿಡುಗಡೆ ಮಾಡಿತ್ತು. ಈ ದಾಖಲೆಗಳನ್ನು ನಕಲಿ ಎಂದು ಎಎಪಿ ಆರೋಪಿಸಿತ್ತು.
ಎಎಪಿ ಮಾಜಿ ನಾಯಕ ಅಶುತೋಷ್ ಅವರು ದಾಖಲೆಗಳಲ್ಲಿನ ವ್ಯತ್ಯಾಸಗಳನ್ನು ಎತ್ತಿ ತೋರಿಸಿದ್ದರು. ಬಿಎ ಪದವಿಯಲ್ಲಿನ ಪ್ರಧಾನಿ ಹೆಸರು, ಎಂಎ ಪದವಿಗಿಂತ ಭಿನ್ನವಾಗಿದೆ ಎಂದು ಅವರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಸ್ವತಃ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ ಮತ್ತು ದಿವಂಗತ ಅರುಣ್ ಜೇಟ್ಲಿ, ಪದವಿ ಪ್ರಮಾಣ ಪತ್ರಗಳ ಪ್ರತಿಗಳನ್ನು ಬಿಡುಗಡೆ ಮಾಡಿದ್ದರು. ಅಂದು ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಿದ್ದರು.
ಪದವಿ ಪಡೆಯಲು ಪ್ರಧಾನಿ ಮೋದಿ ಅವರು ವಿದ್ಯಾರ್ಥಿ ಜೀವನದಲ್ಲಿ ಪ್ರಯಾಸಪಟ್ಟಿದ್ದಾರೆ ಮತ್ತು ಕಠಿಣ ಪರಿಶ್ರಮ ಹಾಕಿದ್ದಾರೆ ಎಂದೂ ಜೇಟ್ಲಿ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮಾಹಿತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಏಳು ವರ್ಷಗಳ ಹಿಂದಿನ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿತು. ಅಲ್ಲದೇ, ಕೇಜ್ರಿವಾಲ್‌ಗೆ ₹25 ಸಾವಿರ ದಂಡ ವಿಧಿಸಿತು.