ನವದೆಹಲಿ: ಕೆಲವು ವಿದೇಶಿ ವಿಶ್ವವಿದ್ಯಾಲಯಗಳು ಕೂಡ ಭಾರತ ವಿರೋಧಿ ಚಟುವಟಿಕೆಗಳ ಕೇಂದ್ರಗಳಾಗುತ್ತಿರುವುದರಿಂದ ಇಂತಹ ಚಟುವಟಿಕೆಗಳು ದ್ವಿಗುಣಗೊಂಡಿವೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
16ನೇ ನಾಗರಿಕ ಸೇವೆಗಳ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ದೇಶದ ಸ್ವಯಂಘೋಷಿತ ಗಣ್ಯರ ಗುಪ್ತ ಕಾರ್ಯಸೂಚಿಯಲ್ಲಿನ ಒಳನೋಟಗಳು ಆತಂಕಕಾರಿ' ಎಂದೂ ಅವರು ತಿಳಿಸಿದ್ದಾರೆ.
'ಭಾರತದ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸಾಂಸ್ಕೃತಿಕ ಸಮಗ್ರತೆಯನ್ನು ಯಾವುದೇ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ಸಂರಕ್ಷಿಸುವ ಜವಾಬ್ದಾರಿಯನ್ನು ಸಂಸತ್ ಹೊಂದಿದೆ' ಎಂದಿದ್ದಾರೆ.
ಭಾರತದ ಅಸಾಧಾರಣ ಬೆಳವಣಿಗೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಕೆಲವರು ನಕಾರಾತ್ಮಕ ಧೋರಣೆ ತೋರುತ್ತಿರುವುದು ನೋವಿನ ಸಂಗತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರು ಉಲ್ಲೇಖಿಸದೆ ಟೀಕಿಸಿದರು.
ಆತ್ಮಾವಲೋಕನ ಮಾಡಿಕೊಳ್ಳಿ:
ಕೆಲವು ರಾಜ್ಯಗಳ ಅಧಿಕಾರಿಗಳು ರಾಜಕಾರಣಿಗಳೂ ಅಸೂಯೆಪಡುವಂತಹ ಹೆಚ್ಚಿನ ಅಧಿಕಾರಗಳನ್ನು ಹೊಂದಿದ್ದಾರೆ. ಅಂಥವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದೂ ಧನಕರ್ ಅವರು ಹೇಳಿದ್ದಾರೆ.