ನವದೆಹಲಿ: ಜಗತ್ತು ಎದುರಿಸುತ್ತಿರುವ ಯುದ್ಧ, ಆರ್ಥಿಕ ಅಸ್ಥಿರತೆ, ಭಯೋತ್ಪಾದನೆ, ಅಸಮಾನತೆ ಸೇರಿದಂತೆ ಹವಾಮಾನ ಬದಲಾವಣೆಯಂತಹ ಸವಾಲುಗಳಿಗೆ ಭಗವಾನ್ ಬುದ್ಧನ ಆಲೋಚನೆಗಳು ಪರಿಹಾರ ಒದಗಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಇಲ್ಲಿ ನಡೆದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜನರ ಜತೆಗೆ ರಾಷ್ಟ್ರಗಳು ಸಹ ತಮ್ಮ ಆಸಕ್ತಿಯೊಂದಿಗೆ ಜಾಗತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ. ಬಡವರು ಹಾಗೂ ಸಂಪನ್ಮೂಲಗಳ ಕೊರತೆ ಹೊಂದಿರುವ ದೇಶಗಳ ಕುರಿತು ಜಗತ್ತು ಯೋಚಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಭಾರತವು ಬುದ್ಧನು ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು. ಟರ್ಕಿ ಭೂಕಂಪ ನಂತರ ಸಹಾಯಕ್ಕೆ ದಾವಿಸಿದ್ದನ್ನು ಉಲ್ಲೇಖಿಸಿ, ಪ್ರತಿಯೊಬ್ಬ ಮನುಷ್ಯನ ನೋವನ್ನು ತನ್ನದೇ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿರುವ ಮೋದಿ ಜನ್ಮಸ್ಥಳ ಮತ್ತು ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಬುದ್ಧನ ವಿಚಾರಗಳನ್ನು ಪ್ರಚಾರ ಮಾಡಲು ಅಲ್ಲಿನ ಸರ್ಕಾರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಏಪ್ರಿಲ್ 20 ಮತ್ತು 21 ರಂದು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ ಸಹಯೋಗದೊಂದಿಗೆ ಸಂಸ್ಕೃತಿ ಸಚಿವಾಲಯವು ಶೃಂಗಸಭೆಯನ್ನು ಆಯೋಜಿಸಿದೆ.