ತಿರುವನಂತಪುರ : ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಸಿಇಆರ್‌ಟಿ) ತೆಗೆದುಹಾಕಿದ 11 ಮತ್ತು 12ನೇ ತರಗತಿಗಳ ಪಾಠ ಪುಸ್ತಕದಲ್ಲಿದ್ದ ಗಾಂಧಿ ಹತ್ಯೆ, ಆರ್‌ಎಸ್‌ಎಸ್ ನಿಷೇಧ ಕುರಿತ ಪಠ್ಯಗಳನ್ನು ಇಲ್ಲಿನ ಕಾಲೇಜುಗಳು ಬೋಧಿಸುವ ಸಾಧ್ಯತೆಯನ್ನು ಕೇರಳ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎಸ್‌ಸಿಇಆರ್‌ಟಿ) ವ್ಯಕ್ತಪಡಿಸಿದೆ.
ಪಠ್ಯದ ಗುಣಮಟ್ಟ ಹೆಚ್ಚಿಸುವ ಹಿನ್ನೆಲೆಯಲ್ಲಿ ಎನ್‌ಸಿಆರ್‌ಟಿ ಇತ್ತೀಚೆಗೆ ಪಾಠ ಪುಸ್ತಕದ ವಿಷಯಗಳಲ್ಲಿ ಬದಲಾವಣೆ ಮಾಡಿದ್ದು, 12ನೇ ತರಗತಿಯ ಇತಿಹಾಸ ಪುಸ್ತಕದಲ್ಲಿರುವ ಮಹಾತ್ಮಾ ಗಾಂಧಿ ಅವರು ಹಿಂದು-ಮುಸ್ಲಿಂ ಏಕತೆಗಾಗಿ ನಡೆಸಿದ ಹೋರಾಟ ಹಿಂದೂ ತೀವ್ರವಾದಿಗಳನ್ನು ಪ್ರಚೋದಿಸಿತೆಂಬ ಪಠ್ಯದ ಭಾಗವನ್ನು ಕೈಬಿಟ್ಟಿದೆ. ಜೊತೆಗೆ, ಗಾಂಧಿ ಹತ್ಯೆಯ ನಂತರ ಆಗಿನ ಸರ್ಕಾರ ಆರ್‌ಎಸ್‌ಎಸ್ ನಿಷೇಧಿಸಲು ತೀರ್ಮಾನಿಸಿದ ವಿಷಯವನ್ನೂ ತೆಗೆದುಹಾಕಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಮಂಗಳವಾರ ಕೇರಳ ಶಿಕ್ಷಣ ಸಂಶೋಧನಾ ಮಂಡಳಿ ನಡೆಸಿದ ಸಭೆಯಲ್ಲಿ ಚರ್ಚಿತವಾಗಿದ್ದು, ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಕ್ಕೆ ತಂದಿದ್ದಾರೆ.
ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದುಹಾಕಿದ ಪಠ್ಯವನ್ನು ಎಸ್‌ಸಿಇಆರ್‌ಟಿ ಅಧಿಸೂಚನೆಯಂತೆ ಇಲ್ಲಿನ ಕಾಲೇಜುಗಳಲ್ಲಿ ಬೋಧಿಸುವ ಇಂಗಿತ ವ್ಯಕ್ತವಾಗಿದೆ.