ಶ್ರೀಹರಿಕೋಟ: ನ್ಯಾವಿಗೇಷನ್ (ಪಥದರ್ಶಕ) ಉಪಗ್ರಹ 'ಎನ್‌ವಿಎಸ್-01' ಅನ್ನು ಹೊತ್ತ ಜಿಎಸ್‌ಎಲ್‌ವಿ ರಾಕೆಟ್ ಸೋಮವಾರ ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿತು.
ಉಡಾವಣೆಗೊಂಡ ಸುಮಾರು 19 ನಿಮಿಷಗಳಲ್ಲಿ 251 ಕಿಮೀ ಎತ್ತರದ ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹ ಯಶಸ್ವಿಯಾಗಿ ಸೇರಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ನೆಲೆಯಿಂದ ಬೆಳಿಗ್ಗೆ 10.42ರ ಸಮಯದಲ್ಲಿ 51.7 ಮೀಟರ್ ಎತ್ತರದ ರಾಕೆಟ್ ಆಕಾಶಕ್ಕೆ ಚಿಮ್ಮಿತು.
ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ-ನಾವಿಕ್ (NavIC)ನ ಸೇವೆಗಳ ನಿರಂತರತೆಯನ್ನು ಖಾತ್ರಿಪಡಿಸುವ ವಿಷಯದಲ್ಲಿ ಎರಡನೇ ತಲೆಮಾರಿನ ಈ ಉಪಗ್ರಹದ ಉಡಾವಣೆಯು ಅತ್ಯಂತ ಮಹತ್ವದ್ದು ಎನಿಸಿಕೊಂಡಿದೆ. ದೇಶದಲ್ಲಿ ನಿಖರವಾದ ಮತ್ತು ನೈಜ ಪಥದರ್ಶಕ ಮಾಹಿತಿಯನ್ನು ಈ ಉಪಗ್ರಹಗಳು ಒದಗಿಸಲಿದೆ ಎಂದು ಇಸ್ರೊ ಹೇಳಿದೆ.