ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್ಯು), ಎಡಪಕ್ಷಗಳಿಗೆ ನಿಷ್ಠವಾಗಿರುವ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ). ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ (ಎಐಎಸ್‌ಎಫ್), ಆಮ್ ಆದ್ಮಿ ಪಕ್ಷದ ಛಾತ್ರ ಯುವ ಸಂಘರ್ಷ ಸಮಿತಿ, ಆರ್ಜೆಡಿಯ ಛಾತ್ರ ರಾಷ್ಟ್ರೀಯ ಜನತಾ ದಳ,ಸಮಾಜವಾದಿ ಛಾತ್ರ ಸಂಘರ್ಷ ಹಾಗೂ ಡಿಎಂಕೆಯ ವಿದ್ಯಾರ್ಥಿ ಘಟಕಗಳು ಸಭೆಯಲ್ಲಿ ಭಾಗವಹಿಸಿದ್ದವು.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಕೂಡಾ ವಿದ್ಯಾರ್ಥಿ ನಾಯಕರು ಭೇಟಿಯಾಗಿ, ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ಸರಕಾರದ ಅಧಿಕಾರ ಕೇಂದ್ರೀಕರಣ,ಕೇಸರೀಕರಣ ಹಾಗೂ ಶಿಕ್ಷಣದ ವಾಣಿಜ್ಯೀಕರಣದ ವಿರುದ್ಧ ಏಕೀಕೃತ ವಿದ್ಯಾರ್ಥಿ ಚಳವಳಿಯ ಅಗತ್ಯದ ಬಗ್ಗೆ ಚರ್ಚಿಸುವುದು ಕೂಡಾ ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿತ್ತು ಎಂದು ವಿದ್ಯಾರ್ಥಿ ನಾಯಕರ ಜಂಟಿ ಹೇಳಿಕೆ ತಿಳಿಸಿದೆ.
ಶಿಕ್ಷಣ ನೀತಿಯಲ್ಲಿ ರಾಜ್ಯಗಳ ಹಕ್ಕುಗಳಿಗೆ ಚ್ಯುತಿ ತರುವ ವಿದ್ಯಾರ್ಥಿ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಜಾತಾಂತ್ರಿಕ ವಿರೋಧಿ ಅನುಷ್ಠಾನದ ವಿರುದ್ಧ ಜಂಟಿ ಪ್ರತಿಭಟನೆಗಳನ್ನು ನಡೆಸಲು ಸಂಘಟನೆಗಳ ನಾಯಕರು ಅವಿರೋಧವಾಗಿ ನಿರ್ಧರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
'' ಪರ್ಯಾಯವಾದ ಪ್ರಗತಿಪರ, ವೈಜ್ಞಾನಿಕ, ಜಾತ್ಯತೀತ ಹಾಗೂ ಪ್ರಜಾತಾಂತ್ರಿಕ ಶೈಕ್ಷಣಿಕ ಕಾರ್ಯಸೂಚಿಗೆ ಸಿದ್ಧತೆ ನಡೆಸುವುದೇ ಸಭೆಯ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅಪ್ರಜಾಸತ್ಮಾಕ ಅನುಷ್ಠಾನವನ್ನು ವಿರೋಧಿಸಲು ಆಯಾ ರಾಜ್ಯಗಳಲ್ಲಿ ಪ್ರಜಾತಾಂತ್ರಿಕ, ಪ್ರಗತಿಪರ ಹಾಗೂ ಜಾತ್ಯತೀತ ವಿದ್ಯಾರ್ಥಿ ಚಳವಳಿಗಳನ್ನು ರೂಪಿಸಲು ನಾಯಕರು ನಿರ್ಧರಿಸಿದ್ದಾರೆ'' ಎಂದು ಹೇಳಿಕೆ ತಿಳಿಸಿದೆ
''ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ ಹಾಗೂ ಕೇಂದ್ರೀಕರಣದ ನೀತಿಗಳನ್ನು ಅನುಷ್ಠಾನಗೊಳಿಸಲು ಬಿಜೆಪಿ ಸರಕಾರವು ಎನ್‌ಇಪಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹಲವಾರು ಶಾಲೆಗಳು ಮುಚ್ಚುಗಡೆಗೊಳ್ಳುವುದನ್ನು, ಶುಲ್ಕ ಏರಿಕೆ,ವಿದ್ಯಾರ್ಥಿವೇತನದಲ್ಲಿ ಇಳಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳವಾಗಿರುವುದನ್ನು ನಾವು ಕಂಡಿದ್ದೇವೆ. ಜಾತ್ಯತೀತತೆ, ಪ್ರಜಾಪ್ರಭುತ್ವ, ಪ್ರಗತಿ ಹಾಗೂ ವೈಜ್ಞಾನಿಕ ಮನೋಭಾವದಲ್ಲಿ ನಂಬಿಕೆಯಿರುವವರು ಎನ್‌ಇಪಿ ವಿರುದ್ಧ ಒಂದುಗೂಡಿದ್ದಾರೆ'' ಎಂದು ಬಿಸ್ವಾಸ್ ತಿಳಿಸಿದರು.