ತಿರುವನಂತಪುರ :ಕೇರಳ ತ್ರಿಶ್ಶೂರ್‌ನಲ್ಲಿ ಮಣಪ್ಪುರಂ ಫೈನಾನ್ಸ್‌ಗೆ ಸೇರಿದ ಆರು ಕಚೇರಿ ಆವರಣಗಳಲ್ಲಿ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಉಪಾಧ್ಯಕ್ಷ ನಂದಕುಮಾರ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ ಕಾನೂನು ಜಾರಿ ನಿರ್ದೇಶನಾಲಯ, ಎಂಟು ಬ್ಯಾಂಕ್ ಖಾತೆಗಳು ಸೇರಿದಂತೆ 143 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳಿಗೆ ತಡೆ ವಿಧಿಸಿದೆ.
ಅಪರಾಧ ಕೃತ್ಯದಿಂದ ಬಂದ ಮೊತ್ತವನ್ನು ಬೇರೆಡೆಗೆ ವಿಮುಖಗೊಳಿಸಿ ನಂದಕುಮಾರ್ ಸ್ಥಿರಾಸ್ತಿಗಳಾಗಿ ಪರಿವರ್ತಿಸಿ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಮತ್ತು ಮಣಪ್ಪುರಂ ಫೈನಾನ್ಸ್ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ನಿರ್ದೇಶನಾಲಯ ದೂರಿದೆ. ಹಣ ದುರುಪಯೋಗದಲ್ಲಿ ಸಹಕರಿಸಿದ ಶಂಕೆ ಇರುವ ಕಂಪನಿಯ ಸಿಎಫ್‌ಓ ಹಾಗೂ ಇತರ ಉದ್ಯೋಗಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಹಣ ಅವ್ಯವಹಾರ ಮತ್ತು ಸುಮಾರು 60 ಆಸ್ತಿಗಳಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ವಿವಿಧ ದಾಖಲೆಗಳನ್ನು ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದೆ.
"ಹಣದ ಅವ್ಯವಹಾರ ಮತ್ತು ಸಾರ್ವಜನಿಕ ಠೇವಣಿಗಳ ದೊಡ್ಡ ಪ್ರಮಾಣದ ನಗದು ವಹಿವಾಟು ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಇವೆಲ್ಲವನ್ನೂ ನಂದಕುಮಾರ್ ಅವರು ತಮ್ಮ ಮಾಲೀಕತ್ವದ ಉದ್ಯಮವಾದ ಮಣಪ್ಪುರಂ ಆಗ್ರೋ ಫಾರ್ಮ್ಸ್ ಮೂಲಕ ಆರ್‌ಬಿಐ ಅನುಮೋದನೆ ಇಲ್ಲದೇ ನಡೆಸಿದ್ದಾರೆ ಎಂದು ಹೇಳಿದೆ.
ಮಣಪ್ಪುರಂ ಫೈನಾನ್ಸ್‌ನ ವಿವಿಧ ಶಾಖಾ ಕಚೇರಿಗಳ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಠೇವಣಿಯನ್ನು ಅಕ್ರಮವಾಗಿ ಸ್ವೀಕರಿಸಲಾಗಿದೆ ಎಂದು ಇ.ಡಿ. ವಿವರಿಸಿದೆ. ಅಕ್ರಮವಾಗಿ ಸಂಗ್ರಹಿಸಿದ ಮೊತ್ತದ ಪೈಕಿ 143 ಕೋಟಿ ರೂಪಾಯಿ ಪತ್ತಯಾಗಿದೆ ಎಂದು ಏಝೆನ್ಸಿ ಹೇಳಿದೆ.