ಮುಂಬೈ : 16 ವರ್ಷದ ಬಾಲಕನೊಬ್ಬ ಪ್ಲಾಸ್ಟಿಕ್ ಗನ್ (Plastic Gun) ತೋರಿಸಿ ಚಿನ್ನಾಭರಣ ಅಂಗಡಿಯನ್ನು (Jewellery Shop) ದರೋಡೆ ಮಾಡಲು ಯತ್ನಿಸಿದ ಘಟನೆ ಮುಂಬೈನ (Mumbai) ಪಶ್ಚಿಮ ಭಾಯಂದರ್ನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕ ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡುವುದಕ್ಕೆ ಕಳ್ಳತನ ಮಾಡಲು ಯತ್ನಿಸಿದ್ದಾಗಿ ಹೇಳಿದ್ದಾನೆ. ಶನಿವಾರ 4:30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಆಭರಣ ಅಂಗಡಿಯೊಂದಕ್ಕೆ ನುಗ್ಗಿದ ಬಾಲಕ ಪ್ಲಾಸ್ಟಿಕ್ ಗನ್ ತೋರಿಸಿ ದರೋಡೆ ಮಾಡಿದ್ದಾನೆ. ಭಾಯಂದರ್ನ 60 ಅಡಿ ರಸ್ತೆಯಲ್ಲಿರುವ ಶಕ್ತಿ ಜ್ಯುವೆಲರ್ಸ್ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 4.30 ರ ಸಮಯದಲ್ಲಿ ಪಶ್ಚಿಮ ಭಾಯಂದರ್ ವೆಸ್ಟ್‌ನ 60 ಅಡಿ ರಸ್ತೆಯಲ್ಲಿರುವ ಶಕ್ತಿ ಜ್ಯುವೆಲರ್ಸ್ ಅಂಗಡಿಗೆ ಬಂದ ಬಾಲಕ ಮೊದಲು ತಾನೂ ಚಿನ್ನದ ಬಿಸ್ಕೆಟ್ಗಳನ್ನು ಮಾರಾಟ ಮಾಡಲು ಬಂದಿದ್ದೇನೆ ಎಂದು ಆಭರಣ ವ್ಯಾಪಾರಿಗೆ ತಿಳಿಸಿದ್ದಾನೆ. ಆದರೆ ಆಭರಣ ವ್ಯಾಪಾರಿ ತಾನೂ ಅವುಗಳನ್ನು ಖರೀದಿಸುವುದಿಲ್ಲ ಎಂದು ತಿಳಿಸಿ, ಹೊರ ಹೋಗಲು ಸೂಚಿಸಿದ್ದಾನೆ. ಕೆಲವು ನಿಮಿಷಗಳ ನಂತರ, ಹುಡುಗ ಮತ್ತೆ ಅಂಗಡಿ ಒಳಗೆ ಬಂದವನೇ ಪ್ಲಾಸ್ಟಿಕ್ ಗನ್ ಹಿಡಿದು ಹೆದರಿಸಿ ಆಭರಣಗಳನ್ನು ದರೋಡೆ ಮಾಡಿದ್ದಾನೆ ಎಂದು ಭಾಯಂದರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮುಕುಟರಾವ್ ಪಾಟೀಲ್ ತಿಳಿಸಿದ್ದಾರೆ.
ನಿಜವಾದ ಗನ್ ಎಂದೇ ಭಾವಿಸಿದ್ದ ಮಾಲೀಕ
ಬಾಲಕ ತನ್ನ ಬಳಿ ಇರುವ ಗನ್ ಅನ್ನು ನಿಜವಾದ ಗನ್ ಎಂದು ವ್ಯಾಪಾರಿಯನ್ನ ಮೂರ್ಖನನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲದೆ ಆಭರಣ ಅಂಗಡಿಯಲ್ಲಿದ್ದ ಹಲವಾರು ಆಭರಣಗಳನ್ನು ಲೂಟಿ ಮಾಡಿದ್ದಾನೆ. ಆದರೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವರು ಬಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿನಿಂದ ಕದ್ದ ಚಿನ್ನಾಭರಣಗಳಲ್ಲದೆ, ಪ್ಲಾಸ್ಟಿಕ್ ಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತಂದೆಯ ಡಿಮ್ಯಾಟ್ ಅಕೌಂಟ್ ನಿರ್ವಹಣೆ
ಆರೋಪಿಯು ಎಸ್‌ಎಸ್‌ಸಿ ವಿದ್ಯಾರ್ಥಿಯಾಗಿದ್ದು, ಭಾಯಂದರ್ ನಿವಾಸಿಯಾಗಿದ್ದಾನೆ. ಆತನ ತಂದೆ ಒಂದು ಚಿಕ್ಕ ಟೀ ಅಂಗಡಿ ನಡೆಸುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಬಾಲಕ ತನ್ನ ತಂದೆಯ ಡಿಮ್ಯಾಟ್ ಖಾತೆಯನ್ನು ನಿರ್ವಹಿಸುತ್ತಿದ್ದು, ಅದರಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದನು. ಆದರೆ ಹೆಚ್ಚಿನ ಆದಾಯ ಗಳಿಸಬೇಕಾಗದರೆ ಹೆಚ್ಚಿನ ಹಣದ ಅಗತ್ಯವಿದ್ದರಿಂದ, ಕಳ್ಳತನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಷೇರು ಮಾರುಕಟ್ಟೆಯಲ್ಲಿ ಶ್ರೀಮಂತನಾಗಲು ಬಯಸಿದ್ದ
ಬಾಲಕನಿಗೆ ಸಾಕಷ್ಟು ಹಣಗಳಿಸಿ ಶ್ರೀಮಂತ ವ್ಯಕ್ತಿಯಾಗಬೇಕೆಂಬ ಆಸೆಯಿದ್ದು, ಅದಕ್ಕಾಗಿ ಷೇರು ಮಾರುಕಟ್ಟೆಯಿಂದ ಹೆಚ್ಚು ಹಣವನ್ನು ಹೂಡಿಕೆ ಮಾಡಲು ಬಯಸಿದ್ದ. ತನ್ನ ಬಳಿ ಹಣವಿಲ್ಲದ ಕಾರಣ ಕಳ್ಳತನದ ಮಾರ್ಗವನ್ನು ಹಿಡಿದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಬಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ
ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬುರ್ಕಾ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ತಾರಾಪುರಂ ಪಕ್ಕದ ಅಲಂಗಿಯಂ ಪ್ರದೇಶದ ಕೆನರಾ ಬ್ಯಾಂಕ್‌ನಲ್ಲಿ ದರೋಡೆಗೆ ಯತ್ನಿಸಿದ್ದ. ಗನ್ ಮತ್ತು ಟೈಮ್ ಬಾಂಬ್ ಹೊಂದಿರುವುದಾಗಿ ಹೇಳಿಕೊಂಡು ಎಲ್ಲರನ್ನು ಹೆದರಿಸಿದ್ದ. ಅಲ್ಲಿದ್ದ ಜನರು ಆ ವ್ಯಕ್ತಿಯ ಬಳಿ ಬಂದೂಕು ಮತ್ತು ಬಾಂಬ್ ಇದೆ ಎಂದು ಹೆದರಿ ಪಕ್ಕಕ್ಕೆ ಸರಿದಿದ್ದರು.
ಆದರೆ ಸ್ವಲ್ಪ ಸಮಯದಲ್ಲೇ ಕಳ್ಳ ಹಿಡಿದಿದ್ದ ಚಾಕು ಕೆಳಗೆ ಬಿದ್ದಿತು. ಅವನು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಹತ್ತಿರದಲ್ಲಿದ್ದ ಮುದುಕ ತನ್ನ ಟವೆಲ್ ಬಳಸಿ ಆತನನ್ನು ಹಿಡಿದಿದ್ದರು. ತಕ್ಷಣ ಇತರರು ಸಹಾಯಕ್ಕೆ ಬಂದು ಕಳ್ಳನನ್ನು ಹಿಡಿದಿದ್ದಾರೆ. ನಂತರ ಆತನ ಕೈಯಿಂದ ಬಂದೂಕನ್ನು ಕಸಿದು ನೋಡಿದಾಗ ಅದು ಆಟಿಕೆ ಬಂದೂಕು ಎಂದು ತಿಳಿದುಬಂದಿದೆ. ಆತನ ಕೈಯಲ್ಲಿದ್ದ ಟೈಮ್ ಬಾಂಬ್ ಕೂಡ ನಕಲಿಯಾಗಿತ್ತು. ನಂತರ ಪೊಲೀಸರಿಗೆ ಕರೆ ಮಾಡಿ ಆತನನ್ನು ಒಪ್ಪಿಸಲಾಗಿತ್ತು.