ಕಾಸರಗೋಡು: ಎಡರಂಗ ಸರ್ಕಾರದ ಎರಡನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿರುವ ತಾಲೂಕು ಮಟ್ಟದ ದೂರುಪರಿಹಾರ ಅದಾಲತ್ ಅಂಗವಾಗಿ ಹೊಸದುರ್ಗ ತಾಲೂಕಿನಲ್ಲಿ ಸೋಮವಾರ ನಡೆದ ಅದಾಲತ್‍ನಲ್ಲಿ 608 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 166 ಅರ್ಜಿಗಳಿಗೆ ತೀರ್ಪು ಕಲ್ಪಿಸಲಾಯಿತು.
ಲೋಕೋಪಯೋಗಿ, ಪ್ರವಾಸೋದ್ಯಮ ಮತ್ತು ಯುವಜನ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ಹಾಗೂ ಬಂದರು, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ಖಾತೆ ಸಚಿವ ಅಹಮ್ಮದ್ ದೇವರ್ ಕೋವಿಲ್ ನೇತೃತ್ವದಲ್ಲಿ ಅದಾಲತ್ ನಡೆಯಿತು. ಕಾಞಂಗಾಡಿನ ಮಿನಿ ಸಿವಿಲ್‍ಸ್ಟೇಶನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರಾದ ಇ. ಚಂದ್ರಶೇಖರನ್, ಸಿ.ಎಚ್ ಕುಞಂಬು, ಎಂ. ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಭಾಶೇಖರ್, ಎಡಿಎಂ ಕೆ. ನವೀನ್‍ಬಾಬು, ಅಪರ ಜಿಲ್ಲಾಧಿಕಾರಿ ಸುಫ್ಯಾನ್ ಅಹ್ಮದ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವ ಮಣಿಯರ, ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ, ಜಿಲ್ಲಾ ಕೌನ್ಸಿಲರ್ ವಂದನಾ ಬಾಲರಾಜ್, ತಾ.ಪಂ.ವ್ಯಾಪ್ತಿಯ ವಿವಿಧ ಗ್ರಾ.ಪಂ.ಅಧ್ಯಕ್ಷೆ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು. ಬಾಕಿ ಇರುವ ದೂರುಗಳ ಬಗ್ಗೆ ಗರಿಷ್ಠ 15 ದಿನಗಳ ಅವಧಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸಚಿವರು ಸೂಚಿಸಿದರು.