ನವದೆಹಲಿ: ಕಳೆದುಹೋದ ಅಥವಾ ಕಳವಾದ ತಮ್ಮ ಮೊಬೈಲ್ ಫೋನ್‌ಗಳ ಜಾಡು ಹಿಡಿಯಲು ಹಾಗೂ ಅವುಗಳನ್ನು ಸ್ತಂಭನ(ಬ್ಲಾಕ್)ಗೊಳಿಸಲು ಜನರಿಗೆ ಸಾಧ್ಯವಾಗುವಂತೆ ಮಾಡಲು ಕೇಂದ್ರ ಸರಕಾರವು ಮೇ 17ರಂದು ಭಾರತಾದ್ಯಂತ 'ಸಿಇಐಆರ್' ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಿದೆಯೆಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ ಹಾಗೂ ಈಶಾನ್ಯ ಪ್ರಾಂತ ಸೇರಿದಂತೆ ಕೆಲವು ಟೆಲಿಕಾಂ ವರ್ತುಲಗಳಲ್ಲಿ ದೂರಸಂಪರ್ಕ ಇಲಾಖೆಯ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವು (ಸಿಡಾಟ್) ಸಿಇಐಆರ್ ವ್ಯವಸ್ಥೆಯ ಮೇಲುಸ್ತುವಾರಿ ವಹಿಸಲಿದೆ ಎಂದು ಗುರುತು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ಸಿಇಐಆರ್ ವ್ಯವಸ್ಥೆಯು ಮೇ 17ರಂದು ಅಖಿಲ ಭಾರತ ಮಟ್ಟದಲ್ಲಿ ಆರಂಭವಾಗಲಿದೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸಿಡಾಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಜೆಕ್ಟ್ ಬೋರ್ಡ್ನ ಚೇರ್ಮನ್ ರಾಜ್ಕುಮಾರ್ ಉಪಾಧ್ಯಾಯ ಅವರು ಸಿಇಐಆರ್ ವ್ಯವಸ್ಥೆಯ ಆರಂಭದ ದಿನಾಂಕವನ್ನು ದೃಢಪಡಿಸಲಿಲ್ಲ. ಆದಾಗ್ಯೂ ಈ ತಂತ್ರಜ್ಞಾನವು ಅಖಿಲ ಭಾರತ ಮಟ್ಟದಲ್ಲಿ ನಿಯೋಜನೆಗೆ ಸಿದ್ಧವಾಗಿದೆಯೆಂದು ವರದಿ ತಿಳಿಸಿದೆ.
''ಸಿಇಐಆರ್ ವ್ಯವಸ್ಥೆಯು ಕಾರ್ಯನಿರ್ವಹಣೆಗೆ ಸಿದ್ಧವಾಗಿದೆ ಹಾಗೂ ಈ ತ್ರೈಮಾಸಿಕದಲ್ಲಿ ಅದು ಭಾರತದಾದ್ಯಂತ ನಿಯೋಜಿತವಾಗಲಿದೆ. ಇದು ಜನರು ತಮ್ಮ ಕಳೆದುಹೋದ ಮೊಬೈಲ್ ಫೋನನ್ನು ಬ್ಲಾಕ್ ಮಾಡಲು ಹಾಗೂ ಅವುಗಳ ಜಾಡು ಹಿಡಿಯಲು ನೆರವಾಗಲಿದೆ'' ಎಂದು ಉಪಾಧ್ಯಾಯ ತಿಳಿಸಿದ್ದಾರೆ.
ಮೊಬೈಲ್ ಉಪಕರಣದಲ್ಲಿರುವ 15 ಅಂಕಿಗಳ ಐಎಂಇಐಯನ್ನು ಅವುಗಳ ಮಾರಾಟಕ್ಕೆ ಮೊದಲು ಮೊಬೈಲ್ ನೆಟ್ವರ್ಕ್ಗಳಿಗೆ ಬಹಿರಂಗಪಡಿಸುವುದನ್ನು ಕೇಂದ್ರ ಸರಕಾರವು ಕಡ್ಡಾಯಗೊಳಿಸಿದೆ.
ಇದರಿಂದಾಗಿ ಮೊಬೈಲ್ ಜಾಲಗಳು, ಅನುಮೋದಿತವಾದ ಐಎಂಇಐ ಸಂಖ್ಯೆಗಳ ಪಟ್ಟಿಯೊಂದಿಗೆ ಸಂಪರ್ಕಿಸಲ್ಪಡಲಿವೆ. ತಮ್ಮ ಜಾಲದೊಳಗೆ ಯಾವುದೇ ಅನಧಿಕೃತ ಮೊಬೈಲ್ ಫೋನ್‌ಗಳ ಪ್ರವೇಶಿಸಿ ಎಂಬ ಬಗ್ಗೆ ತಪಾಸಣೆ ನಡೆಸಲು ಅವುಗಳಿಗೆ ಸಾಧ್ಯವಾಗಲಿದೆ.
ಸಿಇಐಆರ್ ವ್ಯವಸ್ಥೆಯ ಮೂಲಕ ಮೊಬೈಲ್ ಫೋನ್‌ಗಳ ಐಎಂಇಐ ಸಂಖ್ಯೆ ಹಾಗೂ ಅದರ ಜೊತೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಮೊಬೈಲ್ ನೆಟ್‌ವರ್ಕ್‌ಗಳು ವೀಕ್ಷಿಸಬಹುದಾಗಿದೆ.
ಇದರಿಂದಾಗಿ ಟೆಲಿಕಾಂ ಆಪರೇಟರ್ಗಳು ಹಾಗೂ ಸಿಇಐಆರ್ ವ್ಯವಸ್ಥೆಗೆ ಕಳೆದುಹೋದ ಅಥವಾ ಕಳವಾದ ಮೊಬೈಲ್ ಫೋನ್‌ಗಳ ಜಾಡನ್ನು ಪತ್ತೆಹಚ್ಚಲು ಬಳಸಬಹುದಾಗಿದೆ.
ಕಳೆದುಹೋದ ಮೊಬೈಲ್ ಫೋನ್‌ಗಳ ಐಎಂಇಐ ಸಂಖ್ಯೆಯನ್ನು ಕಿಡಿಗೇಡಿಗಳು ಬದಲಾಯಿಸುವುದು ಸಾಮಾನ್ಯವಾಗಿದ್ದು, ಇದರಿಂದಾಗಿ ಇಂತಹ ಹ್ಯಾಂಡ್‌ಸೆಟ್‌ಗಳ ಪತ್ತೆಹಚ್ಚುವುದನ್ನು ಅಥವಾ ಅವುಗಳನ್ನು ಬ್ಲಾಕ್ ಮಾಡುವುದನ್ನು ತಡೆಯಲ್ಪಡುತ್ತದೆ. ಇದೊಂದು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ. ಆದರೆ ಸಿಇಐಆರ್ ವ್ಯವಸ್ಥೆಯಿಂದಾಗಿ ವಿವಿಧ ಡೇಟಾಬೇಸ್ಗಳ ನೆರವಿನ ಮೂಲಕ ಇಂತಹ ಐಎಂಇಐ ತಿರುಚಲ್ಪಟ್ಟ ಯಾವುದೇ ಮೊಬೈಲ್ಪೋನನ್ನು ಬ್ಲಾಕ್ ಮಾಡಲು ಸಾಧ್ಯವಾಗಲಿದೆ '' ಎಂದು ಉಪಾಧ್ಯಾಯ ತಿಳಿಸಿದ್ದಾರೆ.
ಕಳವಾದ ಹಾಗೂ ಕಳೆದುಹೋದ ಮೊಬೈಲ್ ಫೋನ್‌ಗಳ ಬಗ್ಗೆ ದೂರು ನೀಡುವಿಕೆಯನ್ನು ಸುಗಮಗೊಳಿಸುವುದು ಸಿಇಐಆರ್ನ ಮುಖ್ಯ ಉದ್ದೇಶವಾಗಿದೆ ಮತ್ತು ಇದೊಂದು ರಾಷ್ಟ್ರೀಯ ಭದ್ರತಾ ವಿಚಾರವೆಂದು ಅವರು ಹೇಳಿದರು.
ಇತ್ತೀಚೆಗೆ ಕರ್ನಾಟಕ ಪೊಲೀಸರು ಸಿಇಐಆರ್ ವ್ಯವಸ್ಥೆಯನ್ನು ಬಳಸಿಕೊಂಡು, 2500ಕ್ಕೂ ಅಧಿಕ ಕಳೆದುಹೋದ ಮೊಬೈಲ್ ಫೋನ್‌ಗಳ ಗಳನ್ನು ಪತ್ತೆಹಚ್ಚಿ, ಅವುಗಳನ್ನು ಮಾಲಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದರು.
ಆಯಪಲ್ ಮೊಬೈಲ್ ಫೋನ್ ಕಳೆದುಹೋದ ಮೊಬೈಲ್ ಫೋನ್ಗಳನ್ನು ತನ್ನಲ್ಲಿರುವ ಆಯಪಲ್ ಐಡಿ ಮೂಲಕ ಪತ್ತೆಹಚ್ಚುವ ಹೊಂದಿದೆ. ಆದರೆ ಆಯಂಡ್ರಾಯ್ಡ್ ಮೊಬೈಲ್ ಫೋನ್ಗಳಲ್ಲಿ ಇಂತಹ ವ್ಯವಸ್ಥೆ ಇರುವುದಿಲ್ಲ. ಇನ್ನು ಮುಂದೆ ರಾಷ್ಟ್ರಾದ್ಯಂತ ಸಿಇಐಆರ್ ವ್ಯವಸ್ಥೆಯಿಂದಾಗಿ ಕಳವಾದ ಮೊಬೈಲ್ಗಳನ್ನು ಬಳಸುವುದು ನಿಷ್ಪ್ರಯೋಜಕವೆನಿಸಲಿದೆ.