ನವದೆಹಲಿ: ಸರಕು ಮತ್ತು ಸೇವೆ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ವ್ಯಾಪಕ ಹೆಚ್ಚಳವಾಗಿದ್ದು, ದಾಖಲೆಯ ಆದಾಯ ಹರಿದುಬಂದಿದೆ. ಕಳೆದ ತಿಂಗಳು ಏಪ್ರಿಲ್ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್ಟಿ ಆದಾಯವು 1,87,035 ಕೋಟಿ ರೂಪಾಯಿ. ಇದುವರೆಗೆ ಮಾಸಿಕವಾಗಿ ಸಂಗ್ರಹಗೊಂಡ ಅತ್ಯಂತ ಗರಿಷ್ಠ ಮೊತ್ತ ಇದಾಗಿದ್ದು, ಜಿಎಸ್ಟಿ ಸಂಗ್ರಹದಲ್ಲಿ ದಾಖಲೆಯನ್ನೇ ಬರೆದಿದೆ.
ವ್ಯಾಪಾರ ಚೇತರಿಕೆ
2022ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ, 2023ರ ಏಪ್ರಿಲ್ ತಿಂಗಳಿನಲ್ಲಿ ಸರಕುಗಳ ಆಮದು ಮೇಲಿನ ಜಿಎಸ್ಟಿ ಆದಾಯವು ಶೇಕಡಾ 30ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಜಿಎಸ್ಟಿ ಆದಾಯವು ಶೇಕಡಾ 17ರಷ್ಟು ಹೆಚ್ಚಾಗಿದೆ. 2022ರ ಮಾರ್ಚ್ನಲ್ಲಿ ಒಟ್ಟು ಇ-ವೇ ಬಿಲ್ಗಳ ಸಂಖ್ಯೆ 7.7 ಕೋಟಿಯಾಗಿದೆ. ಇದು 2022ರ ಫೆಬ್ರವರಿಯಲ್ಲಿನ ಇ-ವೇ ಬಿಲ್ಗಳ ಸಂಖ್ಯೆಯಾದ 6.8 ಕೋಟಿಗೆ ಹೋಲಿಸಿದರೆ ಶೇಕಡಾ 13ರಷ್ಟು ಹೆಚ್ಚಾಗಿದೆ. ಇದು ವ್ಯಾಪಾರ ಚಟುವಟಿಕೆಯ ವೇಗದ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಜಿಎಸ್ಟಿಆರ್-3 ಸಲ್ಲಿಸುವ ಮೂಲಕ ಈ ವರ್ಷದ ಏಪ್ರಿಲ್ನಲ್ಲಿ 84.7 ಪ್ರತಿಶತದಷ್ಟು ನೋಂದಾಯಿತ ವ್ಯಾಪಾರ ಸಂಸ್ಥೆಗಳು ತೆರಿಗೆಯನ್ನು ಪಾವತಿಸಿವೆ. ಇದು ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಶೇಕಡಾ 78.3 ರಷ್ಟು ಇತ್ತು. ಅಲ್ಲದೆ, ಇದೇ ಅವಧಿಯಲ್ಲಿ ಶೇಕಡಾ 83.11ರಷ್ಟು ಜಿಎಸ್ಟಿ ನೋಂದಾಯಿತ ವ್ಯವಹಾರಗಳು ಪೂರೈಕೆ ಅಥವಾ ಮಾರಾಟದ ರಿಟರ್ನ್ ಜಿಎಸ್ಟಿಆರ್-1 ಸಲ್ಲಿಸಿವೆ. ಇದು ಕಳೆದ ವರ್ಷದ ಏಪ್ರಿಲ್ನಲ್ಲಿ ಶೇಕಡಾ 73.9ರಷ್ಟು ಇತ್ತು.
ಕಟ್ಟುನಿಟ್ಟಿನ ಕ್ರಮ
ಸುಧಾರಿತ ಅನುಸರಣೆ ಮತ್ತು ವ್ಯಾಪಾರ ಚಟುವಟಿಕೆಯಲ್ಲಿ ಚೇತರಿಕೆಯಿಂದಾಗಿ ಜಿಎಸ್ಟಿ ಆದಾಯ ಸಂಗ್ರಹದಲ್ಲಿ ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ತೆರಿಗೆ ಸಂಗ್ರಹ ಕ್ರಮಗಳಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ತೆರಿಗೆ ಆಡಳಿತವು ತೆರಿಗೆದಾರರು ಸಕಾಲಿಕವಾಗಿ ರಿಟರ್ನ್ಸ್ ಸಲ್ಲಿಸುವಂತೆ ತೆಗೆದುಕೊಂಡ ಹಲವಾರು ಕ್ರಮಗಳು ಸಾಕಷ್ಟು ಫಲ ನೀಡಿವೆ. ತಪುಪ ಮಾಡುವ ತೆರಿಗೆದಾರರ ವಿರುದ್ಧ ಕಟ್ಟುನಿಟ್ಟಾದ ಜಾರಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.
ಭಾರತೀಯ ಆರ್ಥಿಕತೆಗೆ ಉತ್ತಮ ಸುದ್ದಿ! ಕಡಿಮೆ ತೆರಿಗೆ ದರಗಳ ಹೊರತಾಗಿಯೂ ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಜಿಎಸ್ಟಿ ಏಕೀಕರಣ ಮತ್ತು ಅನುಸರಣೆಯನ್ನು ಹೇಗೆ ಹೆಚ್ಚಿಸಿದೆ ಎಂಬುದರ ಯಶಸ್ಸನ್ನು ತೋರಿಸುತ್ತದೆ.