ಶ್ರೀನಗರ: ಚೀನಾ, ಟರ್ಕಿ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಆರಂಭವಾಗಿರುವ ಜಿ-20 ಪ್ರವಾಸೋದ್ಯಮದ ಕಾರ್ಯಕಾರಿ ಗುಂಪಿನ ಸಭೆಯಿಂದ ಅಧಿಕೃತವಾಗಿ ಹಿಂದೆ ಸರಿದಿವೆ. ಈಜಿಪ್ಟ್ ಕೂಡ ಈ ರಾಷ್ಟ್ರಗಳ ಹಾದಿಯನ್ನೇ ತುಳಿದಿದೆ.
17 ರಾಷ್ಟ್ರಗಳ ಒಟ್ಟು 120 ವಿದೇಶಿ ಗಣ್ಯರು ಸೋಮವಾರ ಶ್ರೀನಗರಕ್ಕೆ ಬಂದಿಳಿದಿದ್ದಾರೆ. ಆದರೆ ಚೀನಾ ತನ್ನ ಪ್ರತಿನಿಧಿಗಳನ್ನು ಕಳುಹಿಸಿಲ್ಲ. ಈಜಿಪ್ಟ್ ಹಾಗೂ ಸೌದಿಯಿಂದ ಖಾಸಗಿ ವಲಯದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
'ವಿವಾದಿತ ಪ್ರದೇಶಗಳಲ್ಲಿ ಜಿ-20 ಸಭೆ ನಡೆಸುವುದನ್ನು ಚೀನಾ ವಿರೋಧಿಸಲಿದೆ. ಹೀಗಾಗಿ ನಾವು ಈ ಸಭೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದೇವೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ.
ತನ್ನ ಭೂಪ್ರದೇಶದ ಯಾವುದೇ ಭಾಗದಲ್ಲಾದರೂ ಸಭೆ ನಡೆಸಲು ತಾನು ಸ್ವತಂತ್ರವಾಗಿರುವುದಾಗಿ ಹೇಳಿರುವ ಭಾರತ, ಆ ಮೂಲಕ ಚೀನಾಕ್ಕೆ ತಿರುಗೇಟು ನೀಡಿದೆ.
ಕಾಶ್ಮೀರದಲ್ಲಿ ಸಭೆ ಆಯೋಜಿಸಿರುವ ತನ್ನ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನಕ್ಕೂ ಭಾರತವು ದಿಟ್ಟ ಪ್ರತ್ಯುತ್ತರ ನೀಡಿದೆ.
'ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ನಮ್ಮ ಇಚ್ಛೆಯ ಅನುಸಾರವಾಗಿಯೇ ಶ್ರೀನಗರದಲ್ಲಿ ಸಭೆ ಹಮ್ಮಿಕೊಂಡಿದ್ದೇವೆ. ಇದು ನಮ್ಮ ಹಕ್ಕಿನ ಪರಿಧಿಯೊಳಗೆ ಕೈಗೊಂಡಿರುವ ತೀರ್ಮಾನ' ಎಂದು ಹೇಳಿದೆ.
ಆತಿಥೇಯ ಭಾರತ ಹೊರತುಪಡಿಸಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಜರ್ಮನಿ, ಫ್ರಾನ್ಸ್, ಇಂಡೊನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ದಕ್ಷಿಣ ಆಫ್ರಿಕಾ, ಬ್ರಿಟನ್, ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಈ ರಾಷ್ಟ್ರಗಳ ಪ್ರತಿನಿಧಿಗಳು ಬೆಳಿಗ್ಗೆ 10.30ರ ಸುಮಾರಿಗೆ ದೆಹಲಿಯಿಂದ ಏರ್ ಏಷ್ಯಾ ವಿಮಾನದ ಮೂಲಕ ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದರು. ಜಂಟಿ ಕಾರ್ಯದರ್ಶಿ (ಜಿ-20) ಭಾವನಾ ಸಕ್ಸೇನಾ ಹಾಗೂ ಜಮ್ಮು ಮತ್ತು ಕಾಶ್ಮೀರದ ಇತರ ಹಿರಿಯ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು.
370ನೇ ವಿಧಿ ರದ್ದತಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಮಹತ್ವದ ಸಭೆ ಇದಾಗಿದೆ.