ಮುಂಬೈ: ವಿವಾದ ಹಾಗೂ ತೀವ್ರ ಚರ್ಚೆಯ ನಡುವೆಯೂ 'ದಿ ಕೇರಳ ಸ್ಟೋರಿ' ದೇಶಾದ್ಯಂತ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇದು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ದೇಶಾದ್ಯಂತ ಪ್ರದರ್ಶನ ಮುಂದುವರೆದಿದೆ ಎಂದು ನಿರ್ಮಾಣ ಸಂಸ್ಥೆ ಸನ್‌ಶೈನ್ ಪಿಕ್ಚರ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಸುದೀಪ್ತೋ ಸೇನ್ ನಿರ್ದೇಶನದ ಮತ್ತು ಅದಾ ಶರ್ಮಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿಂದಿ ಚಿತ್ರ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ವಿಪುಲ್ ಷಾ ನಿರ್ಮಿಸಿರುವ 'ಕೇರಳ ಸ್ಟೋರಿ, ಕೇರಳದ ಮಹಿಳೆಯರನ್ನು ಹೇಗೆ ಬಲವಂತದಿಂದ ಮತಾಂತರಗೊಳಿಸಿ ಇಸೀಸ್ ಉಗ್ರ ಸಂಘಟನೆಗೆ ನೇಮಕ ಮಾಡಲಾಗುತಿತ್ತು ಎಂಬುದು ಈ ಚಿತ್ರದ ಕಥೆಯಾಗಿದೆ.
ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಸರ್ಕಾರವು ಮೇ 8 ರಂದು ಚಿತ್ರ ಪ್ರದರ್ಶನವನ್ನು ನಿಷೇಧಿಸಿತ್ತು. ತಮಿಳುನಾಡಿನಲ್ಲಿ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಹಾಗೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಮೇ 7ರಿಂದ ಪ್ರದರ್ಶನವನ್ನು ನಿಲ್ಲಿಸಲು ತಮಿಳುನಾಡಿನ ಚಿತ್ರಮಂದಿರಗಳು ನಿರ್ಧರಿಸಿದ್ದವು. ಚಿತ್ರ ಪ್ರದರ್ಶನ ನಿಷೇಧಿಸುವ ಪಶ್ಚಿಮ ಬಂಗಾಳ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಕಳೆದ ವಾರ ತಡೆಯಾಜ್ಞೆ ನೀಡಿತು ಮತ್ತು ಚಲನಚಿತ್ರ ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡಿಗೆ ಸೂಚಿಸಿತು.
ಕೆಲವು ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಶನಿವಾರ ಪುಣೆಯ ಫಿಲಂ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಥಿಯೇಟರ್‌ನಲ್ಲಿ ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.