ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿಪಕ್ಷಗಳು ಕಸರತ್ತಿನಲ್ಲಿ ತೊಡಗಿವೆ. ಇದರ ಭಾಗವಾಗಿ ಮುಂದಿನ ತಿಂಗಳು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿರುವ ವಿಪಕ್ಷಗಳ ಸಭೆ ನಡೆಯಲಿದ್ದು, ಅದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ.
ಈ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸಭೆ ನಡೆದಿದ್ದು, ಜೂನ್ 12 ರಂದು ಪಾಟ್ನಾದಲ್ಲಿ ವಿಪಕ್ಷಗಳ ಬಹು ನಿರೀಕ್ಷಿತ ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ಒಕ್ಕೂಟವನ್ನು ಬಲಪಡಿಸುವುದಕ್ಕೆ ಮಮತಾ ಬ್ಯಾನರ್ಜಿ ಕೂಡಾ ಆಲೋಚನೆ ಹೊಂದಿರುವುದಾಗಿ ಹಿರಿಯ ಟಿಎಂಸಿ ಮುಖಂಡರೊಬ್ಬರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ. ಕಳೆದ ತಿಂಗಳು ಕೋಲ್ಕತ್ತಾದಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿಯಾದಾಗ ಜಯಪ್ರಕಾಶ್ ನಾರಾಯಣ್ ಅವರನ್ನು ನೆನಪಿಸಿಕೊಂಡ ಬ್ಯಾನರ್ಜಿ, ಪಾಟ್ನಾದಲ್ಲಿ ವಿರೋಧ ಪಕ್ಷದ ನಾಯಕರ ಸಭೆ ಆಯೋಜನೆಗೆ ಸಲಹೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ ಅದು ಪ್ರಬಲವಾಗಿರುವ ಕಡೆಗಳಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಬ್ಯಾನರ್ಜಿ ಹೇಳಿದ್ದರು.ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ಕಡೆಗಳಲ್ಲಿ ಸೀಟು ಹಂಚಿಕೆ ಸೂತ್ರದ ಭರವಸೆ ಕೂಡಾ ನೀಡಿದ್ದರು.
ನಿತೀಶ್ ಕುಮಾರ್ ಕಳೆದ ಆಗಸ್ಟ್ ನಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಾಗಿನಿಂದಲೂ ವಿಪಕ್ಷಗಳ ಮೈತ್ರಿಕೂಟ ರಚನೆಗಾಗಿ ಹೋರಾಡುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚಿಗೆ ಕಾಂಗ್ರೆಸ್ ಮಿತ್ರರಾದ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಮಾತ್ರವಲ್ಲದೆ ಅದರ ವಿರೋಧಿಗಳಾದ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.