ಕೋಲ್ಕತ್ತ: ಭೂಕುಸಿತದ ಮುನ್ಸೂಚನೆ ನೀಡುವ ವ್ಯವಸ್ಥೆಗೆ 2026ರಲ್ಲಿ ದೇಶದಾದ್ಯಂತ ಚಾಲನೆ ಸಿಗಲಿದೆ. ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಭೂಕುಸಿತದ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಹಾಗೂ ಕಾಲಿಂಪೊಂಗ್ ಜಿಲ್ಲೆಗಳು ಹಾಗೂ ತಮಿಳುನಾಡಿನ ನೀಲಗಿರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಸಂಸ್ಥೆಯ ಉಪಮಹಾನಿರ್ದೇಶಕ ಅಸಿತ್ ಸಹಾ ಅವರು ತಿಳಿಸಿದ್ದಾರೆ.
ಪ್ರಾದೇಶಿಕ ಭೂಕುಸಿತ ಮುನ್ಸೂಚನೆ ವ್ಯವಸ್ಥೆಯನ್ನು ಜಿಎಸ್‌ಐ ಅಭಿವೃದ್ಧಿಪಡಿಸುತ್ತಿದ್ದು, ಅದನ್ನು 2026ರ ಬಳಿಕ ಹಂತ ಹಂತವಾಗಿ ದೇಶದಾದ್ಯಂತ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಭೂಕುಸಿತ ಸಂಭಾವ್ಯ ಇರುವ ಪರ್ವತ ಮತ್ತು ಗುಡ್ಡಗಾಡು ಪ್ರದೇಶಗಳ ನಕ್ಷೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 1.3 ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಇದಕ್ಕಾಗಿ ಸಮೀಕ್ಷೆಗೆ ಒಳಪಡಿಸಲಾಗಿದೆ.
ಭಾರತವು ಭೂಕುಸಿತ ಸಂಭಾವ್ಯ ವಲಯದಲ್ಲಿದೆ. ದೇಶದ ಭೂಪ್ರದೇಶದ ಪೈಕಿ 4.2 ಲಕ್ಷ ಚದರ ಕಿಲೋಮೀಟರ್ ಪ್ರದೇಶ ಅಥವಾ ಶೇ 12.6ರಷ್ಟು ಭೂಪ್ರದೇಶವು ಭೂಕುಸಿತ ಸೂಕ್ಷ್ಮ ಪ್ರದೇಶ ಎಂದು ಜಿಎಸ್‌ಐ ಗುರುತಿಸಿದೆ. ದೇಶದ ಯಾವ ಪ್ರದೇಶಗಳು ಭೂಕುಸಿತ ಸೂಕ್ಷ್ಮ ಪ್ರದೇಶಗಳಾಗಿವೆ ಎಂಬುದನ್ನು ಪತ್ತೆಹಚ್ಚಲಾಗಿದ್ದು, ಅವುಗಳನ್ನು ತೀವ್ರತೆಯ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ವಾಯವ್ಯ ಹಾಗೂ ಪೂರ್ವ ಹಿಮಾಲಯ ತಪ್ಪಲಿನಲ್ಲಿರುವ ರಾಜ್ಯಗಳು, ಪಶ್ಚಿಮಘಟ್ಟ ಪ್ರದೇಶಗಳು ಭೂಕುಸಿತದ ಸಾಧ್ಯತೆ ಹೆಚ್ಚು ಇರುವ ಪ್ರದೇಶಗಳಾಗಿವೆ.
1851ರಲ್ಲಿ ಸ್ಥಾಪನೆಯಾದ ಜಗತ್ತಿನ ಅತಿ ಹಳೆಯ ಭೂಸರ್ವೇಕ್ಷಣಾ ಸಂಸ್ಥೆಯಾಗಿರುವ ಜಿಎಸ್‌ಐ, ಇಂತಹ ಅವಘಡಗಳು ನಡೆದಿರುವ ನಿರ್ದಿಷ್ಟ ಸ್ಥಳಗಳ ವಿಸ್ತೃತ ನಕ್ಷೆಯನ್ನು ಸಿದ್ಧಪಡಿಸಿದೆ. ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಈ ಕುರಿತ ಅಧ್ಯಯನವೊಂದನ್ನು ಪೂರ್ಣಗೊಳಿಸಿದೆ. ಮಳೆಯಾಧಾರಿತ ಭೂಕುಸಿತದ ಮುನ್ಸೂಚನೆ ವ್ಯವಸ್ಥೆಯನ್ನು ಸಂಸ್ಥೆ ರೂಪಿಸುತ್ತಿದೆ. ಇಂತಹ ಮುನ್ಸೂಚನೆಗಳನ್ನು ಜನರಿಗೆ ನೀಡುವ ಪ್ರಾಯೋಗಿಕ ಯತ್ನವನ್ನು ಎರಡು ರಾಜ್ಯಗಳಲ್ಲಿ ಈಗಾಗಲೇ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹಿಮಾಲಯ ಪ್ರದೇಶವನ್ನೂ ಒಳಗೊಂಡಂತೆ ದೇಶದ ಆಯ್ದ ಭಾಗಗಳಲ್ಲಿ ಆಯಕ್ಟಿವ್ ಫಾಲ್ಟ್ ಮ್ಯಾಪಿಂಗ್, ಸೆಸ್ಮಿಕ್ ಮೈಕ್ರೊ ಝೋನೇಷನ್ ಮತ್ತು ನಿಯೊಟೆಕ್ಟೊನಿಕ್ ಅಧ್ಯಯನಗಳ ಕುರಿತ ವಿಸ್ತೃತ ಪರಿಶೀಲನೆಯನ್ನೂ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಭೂಕುಸಿತ ಸಂಭಾವ್ಯ ಪ್ರದೇಶಗಳು
ಜಮ್ಮು ಕಾಶ್ಮೀರ ಹಿಮಾಚಲ ಪ್ರದೇಶ ಉತ್ತರಾಖಂಡವನ್ನು ಒಳಗೊಂಡ ವಾಯವ್ಯ ಹಿಮಾಲಯದ ಬೆಟ್ಟ ಪ್ರದೇಶ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಸಿಕ್ಕಿಂ ಅಸ್ಸಾಂ ಅರುಣಾಚಲ ಪ್ರದೇಶ ಮಣಿಪುರ ಮೇಘಾಲಯ ಮಿಜೋರಾಂ ನಾಗಾಲ್ಯಾಂಡ್ ತ್ರಿಪುರಾ ಒಳಗೊಂಡ ಹಿಮಾಲಯದ ಪೂರ್ವಭಾಗದ ಪ್ರದೇಶಗಳು, ಮಹಾರಾಷ್ಟ್ರ ಕರ್ನಾಟಕ ಗೋವಾ ಕೇರಳವನ್ನು ಒಳಗೊಂಡ ಪಶ್ಚಿಮ ಘಟ್ಟದ ಪ್ರದೇಶಗಳು ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಬೆಟ್ಟ ಪ್ರದೇಶಗಳು