ಕಾಸರಗೋಡು: ನೀಲೇಶ್ವರ ನಗರಸಭೆ ಆಶ್ರಯದಲ್ಲಿ ಕಸಮುಕ್ತ ನವಕೇರಳ ಶಿಬಿರದ ಅಂಗವಾಗಿ ಮೇ 20ರಂದು ಬೆಳಗ್ಗೆ 9 ಗಂಟೆಯಿಂದ ಎಲ್ಲ ವಾರ್ಡ್ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಮಳೆಗಾಲಪೂರ್ವ ಶುಚೀಕರಣ ಕಾರ್ಯಕ್ಕೂ ಈ ಮೂಲಕ ಚಾಲನೆ ದೊರೆಯಲಿದೆ. ನಗರಸಭಾ ಮಟ್ಟದ ಉದ್ಘಾಟನೆ 13ನೆ ವರ್ಡಿನಲ್ಲಿ ನಡೆಯಲಿದ್ದು, ನಗರಸಭಾಧ್ಯಕ್ಷೆ ಟಿ.ವಿ ಶಾಂತಾ ನೆರವೇರಿಸುವರು. ಪ್ರತಿ ವಾರ್ಡ್‍ನಲ್ಲಿ ಕೌನ್ಸಿಲರ್‍ಗಳು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ವಸತಿ ಸಂಘಗಳ ಸದಸ್ಯರು, ಕುಟುಂಬಶ್ರೀ-ಹಸಿರು ಕ್ರಿಯಾ ಸೇನೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಯುವ ಸ್ವಯಂಸೇವಾ ಸಂಸ್ಥೆಗಳು ಮತ್ತು ಕ್ಲಬ್‍ಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಕ್ರಮದ ಮೂಲಕ ಶಾಲಾ ವಿದ್ಯರ್ಥಿಘಳನ್ನೂ ಒಳಪಡಿಸಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಮತ್ತು ಜಲಾನಯನ ಪ್ರದೇಶಗಳಿಂದ ಕಸ ತೆಗೆದು ಶುಚೀಕರಣ ಕಾರ್ಯ ನಡೆಯಲಿರುವುದು. ನಂತರ ಪ್ರತಿ ವಾರ್ಡ್‍ಗಳನ್ನು ಕಸ ಮುಕ್ತ ವಾರ್ಡ್ ಎಂದು ಘೋಷಿಸಲಾಗುತ್ತದೆ.
ಕಾರ್ಯಕ್ರಮದ ಯಶಸ್ಸಿಗಾಗಿ ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇ 20ರಂದು ಸ್ವಚ್ಛತಾ ಹರತಾಳ ನಡೆಸಲು ತೀರ್ಮಾನಿಸಲಾಯಿತು. ಕೌನ್ಸಿಲರ್‍ಗಳು, ಹಸಿರು ಕ್ರಿಯಾ ಸೇನೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ನೌಕರರು, ವರ್ತಕರು ಮತ್ತು ಕೈಗಾರಿಕೋದ್ಯಮಿಗಳ ಸಮಿತಿ - ಸಮನ್ವಯ ಸಮಿತಿ ಪದಾಧಿಕಾರಿಗಳು ಸ್ವಯಂಸೇವಕರು ಸಭೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿ.ಗೌರಿ, ಪಿ.ಸುಭಾಷ್, ಕೌನ್ಸಿಲರ್ ರಫೀಕ್ ಕೊಟ್ಟಾಪುರ, ನಗರಸಭೆ ಕಾರ್ಯದರ್ಶಿ ಕೆ. ಮನೋಜ್ ಕುಮಾರ್ ಮತ್ತು ಶುಚಿತ್ವ ಮಿಷನ್ ಸಂಪನ್ಮೂಲ ವ್ಯಕ್ತಿ ಬಾಲಚಂದ್ರನ್ ಶುಚೀಕರಣ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕಾಯಂ ಸಮಿತಿ ಅಧ್ಯಕ್ಷೆ ಟಿ.ಪಿ.ಲತಾ ಸ್ವಾಗತಿಸಿದರು. ಆರೋಗ್ಯ ಮೇಲ್ವಿಚಾರಕ ಟಿ.ಅಜಿತ್ ವಂದಿಸಿದರು.