ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ 20 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಶಿಶುವಿನ ತಾಯಿ ಮತ್ತು 61 ವರ್ಷದ ವೈದ್ಯೆ ಸೇರಿದ್ದಾರೆ ಎಂದು ಥಾಣೆ ಅಪರಾಧ ವಿಭಾಗ ಘಟಕ ಒಂದರ ಹಿರಿಯ ಇನ್ಸ್‌ಪೆಕ್ಟರ್ ದಿಲೀಪ್ ಪಾಟೀಲ್ ಹೇಳಿದ್ದಾರೆ.
'ಉಲ್ಲಾಸನಗರದ ಮಹಿಳಾ ವೈದ್ಯರೊಬ್ಬರು ಅಗತ್ಯವುಳ್ಳ ದಂಪತಿಗಳಿಗೆ ಶಿಶುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಮಗೆ ಸುಳಿವು ಸಿಕ್ಕಿತು. ನಾವು ಗ್ರಾಹಕ ಹೆಸರಿನಲ್ಲಿ ಹೋಗಿ ಪರಿಶೀಲಿಸಿದೆವು. ಮೇ 17 ರಂದು ವೈದ್ಯರು ಗ್ರಾಹಕರಿಗೆ 20 ದಿನದ ಗಂಡು ಮಗು ಇದೆ 7 ಲಕ್ಷಕ್ಕೆ ದತ್ತು ನೀಡಬಹುದು' ಎಂದು ಹೇಳಿದರು.
'ಆಸ್ಪತ್ರೆಯಲ್ಲಿ ಹಣ ಸಂಗ್ರಹಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಲ್ಲಿ ನಾಸಿಕ್‌ನ ಇಬ್ಬರು ಮಹಿಳೆಯರು, ಕರ್ನಾಟಕದ ಬೆಳಗಾವಿಯ ವ್ಯಕ್ತಿ ಮತ್ತು ಮಗುವಿನ ತಾಯಿ ನಾಸಿಕ್‌ನವರಾಗಿದ್ದಾರೆ' ಎಂದು ಪಾಟೀಲ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಅವರ ವಿರುದ್ಧ ಆರೋಪ ಹೊರಿಸಲಾಗಿದ್ದು, ಮಕ್ಕಳ ಮಾರಾಟ ದಂಧೆ ಮತ್ತು ಆರೋಪಿಗಳ ಚಟುವಟಿಕೆಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.