ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಆಹ್ವಾನದ ಮೇರೆಗೆ ಮೋದಿ ಭೇಟಿ ನೀಡಲಿದ್ದಾರೆ. ಜೂನ್ 22ರಂದು ಬೈಡನ್ ದಂಪತಿ ಔತಣಕೂಟವನ್ನೂ ಆಯೋಜಿಸಿದೆ.
ಭಾರತೀಯ ಅಮೆರಿಕನ್ ಸಮುದಾಯವು ಮೋದಿಯವರ ಭೇಟಿಯನ್ನು ಅತ್ಯಂತ ಉತ್ಸಾಹದಿಂದ ಎದುರು ನೋಡುತ್ತಿದೆ. ಸಮುದಾಯವು ಜೂನ್ 18ರಂದು ವಾಷಿಂಗ್ಟನ್ ಡಿಸಿಯ ರಾಷ್ಟ್ರೀಯ ಸ್ಮಾರಕದ ಸ್ಥಳದಲ್ಲಿ ಒಟ್ಟುಗೂಡಲಿದೆ.
ವಾಷಿಂಗ್ಟನ್‌ನ ರಾಷ್ಟ್ರೀಯ ಸ್ಮಾರಕದಿಂದ ಲಿಂಕನ್ ಸ್ಮಾರಕದವರೆಗೆ ಮೆರವಣಿಗೆ ನಡೆಯಲಿದೆ, ಇದನ್ನು 'ಭಾರತ ಏಕತಾ ದಿನ' ಎಂದು ಕರೆದು ಮೋದಿಜಿ ಅವರನ್ನು ಸ್ವಾಗತಿಸಲಾಗುತ್ತದೆ'ಎಂದು ಸಮುದಾಯದ ಮುಖಂಡ ಅಡಪ ಪ್ರಸಾದ್ ಹೇಳಿದರು. ಅವರು ಅಮೆರಿಕದ ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ (ಒಎಫ್‌ಬಿಜೆಪಿ) ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ.
ಇದೇವೇಳೆ, ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದ ಗೋಲ್ಡನ್ ಬ್ರಿಡ್ಜ್‌ನಂತಹ ಸಾಂಪ್ರದಾಯಿಕ ಸ್ಥಳಗಳೂ ಸೇರಿ ಅಮೆರಿಕದ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣದ ಪ್ರಮುಖ ಸುಮಾರು 20 ನಗರಗಳಲ್ಲಿ, ಇದೇ ರೀತಿಯ ಸ್ವಾಗತ ಮೆರವಣಿಗೆಗಳು ನಡೆಯುತ್ತವೆ.
ಬೋಸ್ಟನ್, ಚಿಕಾಗೊ, ಅಟ್ಲಾಂಟಾ, ಮಿಯಾಮಿ, ಟ್ಯಾಂಪಾ, ಡಲ್ಲಾಸ್, ಹೂಸ್ಟನ್, ಲಾಸ್ ಏಂಜಲೀಸ್, ಸ್ಯಾಕ್ರಮೆಂಟೊ, ಸ್ಯಾನ್ ಫ್ರಾನ್ಸಿಸ್ಕೊ, ಕೊಲಂಬಸ್ ಮತ್ತು ಸೇಂಟ್ ಲೂಯಿಸ್‌ನಲ್ಲೂ ಮೆರವಣಿಗೆ ನಡೆಯಲಿವೆ.