ಶ್ರೀನಗರ: 'ಆರ್ಥಿಕತೆ, ಪರಿಸರ ಮತ್ತು ಸಮಾಜವನ್ನು ಕೇಂದ್ರವಾಗಿಸಿ ಜಾಗತಿಕ ಹೊಣೆ ನಿಭಾಯಿಸಲು ಭಾರತ ಸನ್ನದ್ಧವಾಗಿದೆ' ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದರು.
ಜಿ 20 ಶೃಂಗದ ಸದಸ್ಯ ರಾಷ್ಟ್ರಗಳ ಪ್ರವಾಸೋದ್ಯಮ ಕುರಿತ ಮೂರನೇ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ರಮಣೀಯ ತಾಣವಾಗಿರುವ ಶ್ರೀನಗರದಲ್ಲಿ ನಾವುಗಳು ಇಂದು ಭೇಟಿಯಾಗುತ್ತಿರುವ ಈ ಹೊತ್ತಿನಲ್ಲಿ, ನಾವುಗಳೆಲ್ಲರೂ ಈ ಜಗತ್ತಿನ ಭಾಗ ಎಂಬುದನ್ನು ಆಳವಾಗಿ ಅರಿತುಕೊಳ್ಳಬೇಕಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ನಿಲುವು ಈ ವಿಷಯದಲ್ಲಿ ಸ್ಪಷ್ಟವಾಗಿದೆ' ಎಂದು ಹೇಳಿದರು.
'ಭಾರತದ ಸವಾಲುಗಳು, ಕಾಳಜಿ, ಸೂಚ್ಯಂಕಗಳು ಜಾಗತಿಕವಾದವು ಹೌದು. ಭಾರತದ ಪ್ರಗತಿ ಜಾಗತಿಕ ಪ್ರಗತಿಯೂ ಆಗಿದೆ. ಪ್ರಧಾನಿ ಮೋದಿ ಅವರು ತಾಪಮಾನ ಸವಾಲುಗಳ ಕುರಿತು ಹೆಚ್ಚು ಕಾಳಜಿ ಹೊಂದಿದ್ದಾರೆ. ತಾಪಮಾನ ಕುರಿತ ಗುರಿಯನ್ನು 2070ರ ವೇಳೆಗೆ ಸಾಧಿಸಲು ಭಾರತ ಬದ್ಧವಾಗಿದೆ' ಎಂದರು.
ಶ್ರೀನಗರದ ವಿಶೇಷವನ್ನು ಉಲ್ಲೇಖಿಸಿದ ಅವರು, ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಯು ಬಳಕೆಯಲ್ಲಿದ್ದ ಆರಂಭಿಕ ಪಟ್ಟಣಗಳಲ್ಲಿ ಶ್ರೀನಗರ, ಕಾಶ್ಮೀರವು ಒಂದು. ಇಲ್ಲಿ ರತ್ನಗಂಬಳಿ, ಕಸೂತಿ, ಶಾಲುಗಳ ತಯಾರಿಕೆ ಒಳಗೊಂಡು ಕರಕುಶಲತೆ, ಕುಶಲಕರ್ಮಿಗಳಿದ್ದಾರೆ. ಇನ್ನೊಂದೆಡೆ, ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆ ಸೇರಿದಂತೆ ಆಧುನಿಕ ಸೌಲಭ್ಯಗಳೂ ಇವೆ ಎಂದು ಹೇಳಿದರು.
ಜಿ 20 ಶೃಂಗದ ಭಾರತದ ಅಧ್ಯಕ್ಷತೆ ಕುರಿತು ಉಲ್ಲೇಖಿಸಿದ ಅವರು, ಆರ್ಥಿಕತೆ, ಪರಿಸರ ಮತ್ತು ಸಮಾಜವನ್ನು ಗುರಿಯಾಗಿಸಿ ಇರುವ ಉದ್ದೇಶ ಸಾಧನೆಗೆ ಜಾಗತಿಕ ಹೊಣೆಗಾರಿಕೆಯನ್ನು ವಹಿಸಲು ಭಾರತ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಜಿ 20 ರಾಷ್ಟ್ರಗಳ ಶೃಂಗಸಭೆಯಲ್ಲಿ ಚೀನಾ ಭಾಗವಹಿಸಿಲ್ಲ. 'ಸಭೆಗೆ ಗೈರುಹಾಜರಾಗುವುದರ ನಷ್ಟ ಚೀನಾಗೆ ಹೊರತು, ಭಾರತಕ್ಕಲ್ಲ' ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಚೀನಾ ಹೊರತುಪಡಿಸಿ ಜಿ 20 ಶೃಂಗದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪ್ರವಾಸೋದ್ಯಮ ಕುರಿತು ಇಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 'ಚೀನಾದ ಗೈರುಹಾಜರಿ ಮಹತ್ವದ ಪರಿಣಾಮವೇನೂ ಆಗದು. ಇದರ ನಷ್ಟ ಚೀನಾಗೆ ಹೊರತು ಭಾರತಕ್ಕಲ್ಲ' ಎಂದು ಹೇಳಿದರು. ಪೂರ್ವಲಡಾಖ್‌ನ ಸ್ಥಿತಿಗೂ, ಸಭೆಗೆ ಚೀನಾದ ಗೈರುಹಾಜರಿಗೂ ಸಂಬಂಧವಿದೆಯಾ ಎಂಬ ಪ್ರಶ್ನೆಗೆ, ಅದನ್ನು ವಿದೇಶಾಂಗ ಸಚಿವಾಲಯ ಗಮನಿಸಿಕೊಳ್ಳಲಿದೆ ಎಂದರು.'ನಷ್ಟ ಚೀನಾಗೆ, ಭಾರತಕ್ಕಲ್ಲ'