ಹೈದರಾಬಾದ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಿಲುಕಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಮವಾರ ವಿಶೇಷ ವಿಮಾನದ ಮೂಲಕ ಹೈದರಾಬಾದ್‌ಗೆ ತಲುಪಿದ್ದಾರೆ.
ಒಟ್ಟು 214 ತೆಲುಗು ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 1.22 ಕ್ಕೆ ಬಂದಿಳಿಯಿತು.
106 ವಿದ್ಯಾರ್ಥಿಗಳು ತೆಲಂಗಾಣದವರಾಗಿದ್ದರೆ, ಉಳಿದ 108 ವಿದ್ಯಾರ್ಥಿಗಳು ಆಂಧ್ರಪ್ರದೇಶಕ್ಕೆ ಸೇರಿದವರು.
ತೆಲಂಗಾಣದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ರಾಜ್ಯಗಳಿಗೆ ಸುರಕ್ಷಿತವಾಗಿ ಮರಳಿದ ಬಳಿಕ ಮಾತನಾಡಿದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಹಾಗೂ ವಾಸಿಸುವ ಸ್ಥಳಗಳಲ್ಲಿ ನಡೆದ ಹಿಂಸಾಚಾರದಿಂದಾಗಿ ತಮ್ಮ ಸುರಕ್ಷತೆಯ ಬಗ್ಗೆ ಚಿಂತೆಗೀಡಾಗಿದ್ದೇವು ಎಂದು ಹೇಳಿದ್ದಾರೆ.
'ಮಣಿಪುರದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ನಮ್ಮ ಕಾಲೇಜಿನ ಸುತ್ತಮುತ್ತಲಿನ ಮನೆಗಳು ಸ್ಫೋಟಗೊಳ್ಳುತ್ತಿರುವುದನ್ನು ಕಂಡು ನಾವು ಭಯದಿಂದ ಬದುಕಿದ್ದೇವೆ. ಕಾಲೇಜು ಅಧಿಕಾರಿಗಳು ಅಸಹಾಯಕರಾಗಿದ್ದರು' ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ತಮ್ಮನ್ನು ಸುರಕ್ಷಿತವಾಗಿ ಕರೆತಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ತೆಲಂಗಾಣದ 180 ವಿದ್ಯಾರ್ಥಿಗಳು ಮಣಿಪುರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸಚಿವ ಮಲ್ಲಾ ರೆಡ್ಡಿ ತಿಳಿಸಿದ್ದಾರೆ. ಉಳಿದ ವಿದ್ಯಾರ್ಥಿಗಳು ಕೋಲ್ಕತ್ತಾ ತಲುಪಿದ್ದು, ಸೋಮವಾರ ರಾತ್ರಿ ವೇಳೆಗೆ ಹೈದರಾಬಾದ್‌ಗೆ ಬಂದಿಳಿಯಲಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸೂಚನೆ ಮೇರೆಗೆ ಪೊಲೀಸ್ ಮಹಾನಿರ್ದೇಶಕರು ಮಣಿಪುರದಲ್ಲಿರುವ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ರಾಜ್ಯ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದು, ಅವರ ಪ್ರಯಾಣ ವೆಚ್ಚ ಭರಿಸಿದೆ ಎಂದು ಮಲ್ಲಾ ರೆಡ್ಡಿ ಹೇಳಿದ್ದಾರೆ.
ಸೋಮವಾರದ ವೇಳೆಗೆ ಮತ್ತೊಂದು ವಿಶೇಷ ವಿಮಾನ ಹೈದರಾಬಾದ್‌ಗೆ ತಲುಪಲಿದೆ. ರಾಯ್‌ಪುರ, ಪಾಟ್ನಾ ಮತ್ತು ಭುವನೇಶ್ವರದಿಂದ ವಿವಿಧ ವಿಮಾನಗಳ ಮೂಲಕ ವಿದ್ಯಾರ್ಥಿಗಳು ಇಲ್ಲಿಗೆ ತಲುಪಲಿದ್ದಾರೆ.
ಈ ವೇಳೆ ಶಾಸಕ ಪ್ರಕಾಶ್ ಗೌಡ್, ಜಿಲ್ಲಾಧಿಕಾರಿ ಹರೀಶ್, ಸಿಐಡಿ ಮುಖ್ಯಸ್ಥ ಮಹೇಶ್ ಭಾಗವತ್ ಸೇರಿದಂತೆ ಇತರೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.