ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಇದೇ 21ರೊಳಗೆ ಬಂಧಿಸಬೇಕು ಎಂದು ಪ್ರತಿಭಟನನಿರತ ಕುಸ್ತಿಪಟುಗಳನ್ನು ಬೆಂಬಲಿಸಿರುವ ಸಮಿತಿಯು ಗಡುವು ನೀಡಿದೆ.
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಸಿಂಗ್ ಟಿಕಾಯತ್, ಖಾಪ್ ಮಹಾಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಬಲದೇವ್ ಸಿಂಗ್ ಸಿರ್ಸಾ ಅವರು ಭಾನುವಾರ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಮಾಧ್ಯಮದವರೊಂದಿಗೆ ಮಾತನಾಡಿದರು.
'ಕುಸ್ತಿಪಟುಗಳ ಸಮಿತಿಯು ಪ್ರತಿಭಟನೆಯನ್ನು ಬಾಹ್ಯವಾಗಿ ಬೆಂಬಲಿಸಲಿದೆ. ನಾವೆಲ್ಲರೂ ಕುಸ್ತಿಪಟುಗಳನ್ನು ಬೆಂಬಲಿಸಲಿದ್ದೇವೆ. ಮೇ 21ರಂದು ನಾವು ಮತ್ತೆ ಸಭೆ ಸೇರುತ್ತವೆ. ಅಷ್ಟರಲ್ಲಿ ಸರ್ಕಾರವು ಆರೋಪಿಯನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಸಿದ್ಧಗೊಳಿಸುತ್ತೇವೆ' ಎಂದರು.
ಕಳೆದ ಎರಡು ವಾರಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲಿಸಲು 31 ಪ್ರಮುಖರ ಸಲಹಾ ಸಮಿತಿಯನ್ನು ರಚಿಸಲಾಗಿದೆ.
ಎಸ್‌ಕೆಎಂ ಬೆಂಬಲ: ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ದೇಶದ ಕುಸ್ತಿಪಟುಗಳ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೈಜೋಡಿಸಿದೆ. ತಕ್ಷಣವೇ ಸಿಂಗ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.
ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್‌ಮಂತರ್‌ಗೆ ನೂರಾರು ಸಂಖ್ಯೆಯಲ್ಲಿ ರೈತ ನಾಯಕರು ಭೇಟಿ ನೀಡುವ ಸಾಧ್ಯತೆ ಇರುವ ಕಾರಣಕ್ಕೆ ಭಾನುವಾರ ಪೊಲೀಸರು ಸ್ಥಳದಲ್ಲಿ ಭದ್ರತೆ ಬಿಗಿಗೊಳಿಸಿದರು.
ಪಂಜಾಬ್, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರಪ್ರದೇಶದ ಎಸ್‌ಕೆಎಂ ನಾಯಕರು, ನೂರಾರು ರೈತರೊಂದಿಗೆ ಜಂತರ್ ಮಂತರ್ ಭೇಟಿ ನೀಡುತ್ತಿದ್ದಾರೆ.
ದೆಹಲಿಯನ್ನು ಪ್ರವೇಶಿಸುವ ವಾಹನಗಳ ತಪಾಸಣೆ ಮತ್ತು ಗಸ್ತನ್ನು ದೆಹಲಿ-ಘಾಜಿಪುರ, ಟಿಕ್ರಿ ಮತ್ತು ಸಿಂಘು ಗಡಿಭಾಗಗಳಲ್ಲಿ ಹೆಚ್ಚಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಮತ್ತು ಪ್ರತಿಭಟನ ಸ್ಥಳಗಳಲ್ಲಿ ಹಲವು ಸ್ತರದ ಬ್ಯಾರಿಕೇೆಡ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ.