ರೂಪ್‌ನಗರ್: ಉಸಿರಾಟದ ಸಮಸ್ಯೆ ಎದುರಿಸಿದ ಇಲ್ಲಿನ ಖಾಸಗಿ ಶಾಲೆಯ 24 ಮಕ್ಕಳನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಂಗಲ್ ಪ್ರದೇಶದಲ್ಲಿ ವರದಿಯಾಗಿದೆ. ವಿದ್ಯಾರ್ಥಿಗಳು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಂತೆಯೇ ಶಾಲೆಯನ್ನು ಬಂದ್ ಮಾಡಿ, ಸಂತ್ರಸ್ತ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ರೂಪ್‌ನಗರ್ ಉಪ ಪೊಲೀಸ್ ಆಯುಕ್ತೆ ಪ್ರೀತಿ ಯಾದವ್ ಮಾಹಿತಿ ನೀಡಿದ್ದು, 24 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನವರು ಚೇತರಿಸಿಕೊಂಡಿದ್ದು, ಮನೆಗೆ ಕಳುಹಿಸಲಾಗಿದೆ. 4-5 ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಲಾಗಿದೆ. ಪಿಜಿಐಎಂಇಆರ್‌ಗೆ ದಾಖಲಿಸಿರುವ ವಿದ್ಯಾರ್ಥಿಯ ಆರೋಗ್ಯವೂ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆ ಸಲುವಾಗಿ ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯು, ಅಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಕೈಗಾರಿಕಾ ಕೇಂದ್ರದಲ್ಲಿ ಅನಿಲ ಸೋರಿಕೆಯಾಗಿರಬಹುದು ಎಂದು ಅವರು ಶಂಕಿಸಿದ್ದಾರೆ.
ಅನಿಲ ಸೋರಿಕೆಯ ಮೂಲ ಪತ್ತೆ ಮಾಡಲಾಗುತ್ತಿದೆ. ಆದರೆ, ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ ಎಂದು ಪ್ರೀತಿ ಖಚಿತಪಡಿಸಿದ್ದಾರೆ.