ಕೊಚ್ಚಿ: 25000 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಲಾದ ಮದರ್ ಶಿಫ್ (ಮುಖ್ಯ ಹಡಗು) ಕೊಚ್ಚಿ ಕರಾವಳಿಯಲ್ಲಿ ಮುಳುಗಿದೆ ಎಂದು ಎನ್‍ಸಿಬಿ ಖಚಿತಪಡಿಸಿದೆ.
ನೌಕಾಪಡೆಯ ಮುಂದೆ ಹಡಗು ಮುಳುಗಿದೆ. ಡ್ರಗ್ಸ್ ಗ್ಯಾಂಗ್ ಸ್ಪೀಡ್ ಬೋಟ್ ನಲ್ಲಿ ಪರಾರಿಯಾಗಿದ್ದಾರೆ. ಮುಳುಗಿದ ಹಡಗಿನಿಂದ ಡ್ರಗ್ ಸಂಗ್ರಹವನ್ನು ವಶಪಡಿಸುವ ಪ್ರಯತ್ನಗಳು ಮುಂದುವರಿದಿವೆ. ಸದ್ಯ ಹಡಗಿನಿಂದ ಬೋಟಿಗೆ ಸಾಗಿಸಲಾಗಿದ್ದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಸ್ಪೀಡ್ ಬೋಟ್‍ನಲ್ಲಿ ಪರಾರಿಯಾಗಿರುವ ಮಾದಕ ದ್ರವ್ಯ ಕಳ್ಳಸಾಗಣೆದಾರರು ಭಾರತದ ಸಮುದ್ರ ಗಡಿಯನ್ನು ದಾಟಿಲ್ಲ ಎಂದು ನಂಬಲಾಗಿದೆ ಎಂದು ಎನ್‍ಸಿಬಿ ಮಾಹಿತಿ ನೀಡಿದೆ.
ಇದೇ ವೇಳೆ ಕೊಚ್ಚಿಯಲ್ಲಿ 25,000 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವುದು ದೃಢಪಟ್ಟಿದೆ. ಆಳ ಸಮುದ್ರದಿಂದ ವಶಪಡಿಸಿಕೊಂಡ ಡ್ರಗ್ಸ್ ಎಣಿಕೆ ಪೂರ್ಣಗೊಂಡ ನಂತರ ಇದು ಸ್ಪಷ್ಟವಾಗಿದೆ. 2,525 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಔಷಧ ಎಣಿಕೆ 23 ಗಂಟೆಗಳಲ್ಲಿ ಪೂರ್ಣಗೊಂಡಿತು.
ಹಡಗಿನಿಂದ ಡ್ರಗ್ಸ್ ಪತ್ತೆಯಾದ ಸಂದರ್ಭದಲ್ಲಿ ಅದರ ಮೌಲ್ಯ 12,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ಬಳಿಕದ ನಿಖರ ಎಣಿಕೆಯಲ್ಲಿ 25,000 ಕೋಟಿ ರೂ.ಎಂದು ದೃಢಪಡಿಸಲಾಗಿದೆ. ಇರಾನ್ ಬಂದರಿನಿಂದ ಡ್ರಗ್ಸ್ ಸಮೇತ ಹೊರಟಿದ್ದ ಪಾಕಿಸ್ತಾನದ ಹಡಗು ಭಾರತದ ಜಲಪ್ರದೇಶವನ್ನು ಪ್ರವೇಶಿಸಿದಾಗಿನಿಂದ ನೌಕಾಪಡೆಯ ಕಣ್ಗಾವಲಿನಲ್ಲಿತ್ತು. ಸಮುದ್ರಗುಪ್ತ ಕಾರ್ಯಾಚರಣೆಯ ಭಾಗವಾಗಿ ನಡೆಸಿದ ತನಿಖೆಯು ಬೃಹತ್ ಮಾದಕ ದ್ರವ್ಯ ದಂಧೆ ಪತ್ತೆಗೆ ಕಾರಣವಾಯಿತು. ಇದು ದೇಶದಲ್ಲಿ ನಡೆದಿರುವ ಅತಿ ದೊಡ್ಡ ಮಾದಕ ದ್ರವ್ಯ ಬೇಟೆ ಎಂದು ವರದಿಯಾಗಿದೆ.