ಗುವಾಹಟಿ: ಮಣಿಪುರದ ಕೆಲವೆಡೆ ಮತ್ತೆ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ಹೇರಿದ್ದ ನಿರ್ಬಂಧವನ್ನು ಮತ್ತೆ ಮೇ 26ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗುವಾಹಟಿ: ಮಣಿಪುರದ ಕೆಲವೆಡೆ ಮತ್ತೆ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ಹೇರಿದ್ದ ನಿರ್ಬಂಧವನ್ನು ಮತ್ತೆ ಮೇ 26ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಸಾಮಾಜಿಕ ಜಾಲತಾಣದಲ್ಲಿ ದ್ವೇಷಪ್ರೇರಿತ ಹಾಗೂ ಪ್ರಚೋಚನಕಾರಿ ಸಂದೇಶ ಹರಡುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 'ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಪ್ರಚೋದನಕಾರಿ ಫೋಟೊ, ವಿಡಿಯೊಗಳನ್ನು ಹರಿಬಿಡಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಮಣಿಪುರದ ಗೃಹ ಇಲಾಖೆಯ ಆಯುಕ್ತ ಎಚ್. ಗಯಾನ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಕಠಿಣ ಕ್ರಮ: 'ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ' ಎಂದು ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನಾ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, 'ಸರ್ಕಾರ ಯಾವುದೇ ಸಮುದಾಯದ ವಿರುದ್ಧವಿಲ್ಲ. ಅರಣ್ಯ ಸಂರಕ್ಷಣೆಯ ಜೊತೆಗೆ, ಮಾದಕ ವ್ಯಸನ ಮುಕ್ತ ರಾಜ್ಯ ನಿರ್ಮಾಣಕ್ಕೆ ಕಟಿಬದ್ಧವಾಗಿದೆ' ಎಂದು ತಿಳಿಸಿದರು. ಹಿಂಸಾಚಾರದಿಂದ ರಾಜ್ಯ ತೊರೆದಿರುವ ಜನರು ತಾಯ್ನಾಡಿಗೆ ಮರಳಬೇಕು ಎಂದು ಕೋರಿದರು.
ಮಣಿಪುರದ ನಾಗರಿಕರಿಗೆ ಆಹಾರದ ಅಭಾವ ತಲೆದೋರದಂತೆ ವಿಶೇಷ ಭದ್ರತೆಯೊಂದಿಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.