ನವದೆಹಲಿ: ಮಿಗ್-29ಕೆ ಯುದ್ಧ ವಿಮಾನವು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಮಾನವಾಹಕ ಯುದ್ಧನೌಕೆ 'ಐಎನ್‌ಎಸ್ ವಿಕ್ರಾಂತ್' ಮೇಲೆ ಇದೇ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ (ನೈಟ್ ಲ್ಯಾಂಡಿಂಗ್) ಇಳಿದ ಸಾಧನೆ ಮಾಡಿದೆ.
ನವದೆಹಲಿ: ಮಿಗ್-29ಕೆ ಯುದ್ಧ ವಿಮಾನವು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಮಾನವಾಹಕ ಯುದ್ಧನೌಕೆ 'ಐಎನ್‌ಎಸ್ ವಿಕ್ರಾಂತ್' ಮೇಲೆ ಇದೇ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ (ನೈಟ್ ಲ್ಯಾಂಡಿಂಗ್) ಇಳಿದ ಸಾಧನೆ ಮಾಡಿದೆ.
'ರಾತ್ರಿ ವೇಳೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಮೇಲೆ ಮಿಗ್-29ಕೆ ಯುದ್ಧ ವಿಮಾನವನ್ನು ಇಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಪ್ರಾಯೋಗಿಕವಾಗಿ ನಡೆಸಿದ ಈ ಕಾರ್ಯದಲ್ಲಿ ಯಶಸ್ಸು ಲಭಿಸಿದೆ. ಐಎನ್‌ಎಸ್ ವಿಕ್ರಾಂತ್ ಹಾಗೂ ನೌಕಾಪಡೆಯ ಪೈಲಟ್‌ಗಳ ವೃತ್ತಿಪರತೆ ಹಾಗೂ ಕೌಶಲಕ್ಕೆ ಇದು ಸಾಕ್ಷಿಯಾಗಿದೆ' ಎಂದು ನೌಕಾಪಡೆ ತಿಳಿಸಿದೆ.
'ಐಎನ್‌ಎಸ್ ವಿಕ್ರಾಂತ್ ಬುಧವಾರ ರಾತ್ರಿ ಅರಬ್ಬಿ ಸಮುದ್ರದಲ್ಲಿ ಸಾಗುತ್ತಿದ್ದಾಗ ಅದರ ಮೇಲೆ ಮಿಗ್-29ಕೆ ಇಳಿದಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
'ಈ ಸಾಧನೆಯ ಮೂಲಕ ಭಾರತೀಯ ವಾಯುಪಡೆಯು ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಇದು ವಾಯುಪಡೆಯು ಆತ್ಮನಿರ್ಭರ ಭಾರತದೆಡೆ ದಿಟ್ಟ ಹೆಜ್ಜೆ ಇಟ್ಟಿರುವುದರ ಧ್ಯೋತಕ' ಎಂದು ವಾಯುಪಡೆಯ ವಕ್ತಾರ, ಕಮಾಂಡರ್ ವಿವೇಕ್ ಮಾಧವಾಲ್ ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ನಡೆಸಲಾಗಿದ್ದ ಪ್ರಾಯೋಗಿಕ ಪರೀಕ್ಷೆ ವೇಳೆ ರಷ್ಯಾ ಮೂಲದ ಮಿಗ್-29ಕೆ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಲಘು ಯುದ್ಧ ವಿಮಾನ (ಎಲ್.ಸಿ.ಎ) ಹಗಲು ಹೊತ್ತಿನಲ್ಲಿ ವಿಮಾನವಾಹಕ ಯುದ್ಧನೌಕೆಯ ಮೇಲೆ ಯಶಸ್ವಿಯಾಗಿ ಇಳಿದಿದ್ದವು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.