ಕಾಸರಗೋಡು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಪರೀಕ್ಷೆಯಲ್ಲಿ ಜಿಲ್ಲೆ ಅದ್ಭುತ ಸಾಧನೆ ಮಾಡಿದ್ದು, ಈ ವರ್ಷವೂ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಈ ಬಾರಿ 19,466 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿದ್ದು, ಜಿಲ್ಲೆಯಲ್ಲಿ ಕಳೆದ ವರ್ಷ ಹಂಚಿಕೆಯಾಗಿದ್ದ ಪ್ಲಸ್ ಒನ್, ವಿಎಚ್‍ಎಸ್‍ಇ, ಪಾಲಿಟೆಕ್ನಿಕ್, ಐಟಿಐ ಹಾಗೂ ತಾತ್ಕಾಲಿಕ ಬ್ಯಾಚ್ ಸೇರಿ ಒಟ್ಟು 15,985 ಸೀಟುಗಳಿವೆ. ಅರ್ಹತೆ ಇದ್ದರೂ 3,481 ವಿದ್ಯಾರ್ಥಿಗಳಿಗೆ ಈ ಬಾರಿ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗಕ್ಕೆ ಸೀಟು ಸಿಗುವ ಸಾಧ್ಯತೆ ಇಲ್ಲವೆನ್ನಲಾಗಿದೆ. ಸಾಕಷ್ಟು ಬ್ಯಾಚ್‍ಗಳು ಅಥವಾ ಮೂಲಸೌಕರ್ಯಗಳಿಲ್ಲದೆ ನಿಗದಿತ ಶೇಕಡಾವಾರು ಸೀಟುಗಳನ್ನು ಹೆಚ್ಚಿಸಲು ಪ್ರಯತ್ನಿಸುವುದು ಸಮಸ್ಯೆಗೆ ಪರಿಹಾರವಲ್ಲ. 2013ರ ಪೆÇ್ರ.ಪಿಒಜೆ ಲಬ್ಬಾ ಸಮಿತಿಯ ಶಿಫಾರಸಿನ ಪ್ರಕಾರ ಒಂದು ತರಗತಿಯಲ್ಲಿ ಸರಾಸರಿ 40 ವಿದ್ಯಾರ್ಥಿಗಳು ಇರಬೇಕು. ಆದರೆ ಪ್ರಸ್ತುತ ಒಂದು ಬ್ಯಾಚ್‍ನಲ್ಲಿ 50 ವಿದ್ಯಾರ್ಥಿಗಳನ್ನು ಸೇರಿಸಲು ಸರ್ಕಾರ 10 ಸೀಟುಗಳನ್ನು ಹೆಚ್ಚಿಸಿದೆ. ಈಗ ಸೀಟುಗಳ ಕೊರತೆ ನೀಗಿಸುವ ಭಾಗವಾಗಿ ಶೇ.30ರಷ್ಟು ಸೀಟು ಹೆಚ್ಚಿಸುವ ಮೂಲಕ ಒಂದು ತರಗತಿಗೆ 65ರಿಂದ 70 ವಿದ್ಯಾರ್ಥಿಗಳು ಬರಲಿದ್ದಾರೆ. ಬಿಗಿಯಾಗಿ ಕುಳಿತುಕೊಂಡು ಅವರು ಹೇಗೆ ಕಲಿಯಬಹುದು? ಇದು ಅವೈಜ್ಞಾನಿಕ ಮತ್ತು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.
ಇದು ಮಲಬಾರಿನಲ್ಲಿ ಮಾತ್ರ. ದಕ್ಷಿಣ ಕೇರಳದಲ್ಲಿ ಒಂದು ತರಗತಿಯಲ್ಲಿ ಕೇವಲ 25 ರಿಂದ 30 ವಿದ್ಯಾರ್ಥಿಗಳಷ್ಟೇ ಇರುವುದು. ಸೀಟುಗಳನ್ನು ಹೆಚ್ಚಿಸುವುದರಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ, ಹೊಸ ಬ್ಯಾಚ್‍ಗಳಿಗೆ ಅವಕಾಶ ನೀಡುವುದು ಅವಶ್ಯಕ. ಅದರ ಭಾಗವಾಗಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳನ್ನು ಹೈಯರ್ ಸೆಕೆಂಡರಿಯಾಗಿ ಮೇಲ್ದರ್ಜೆಗೇರಿಸಬೇಕು. ಅಸ್ತಿತ್ವದಲ್ಲಿರುವ ಎಲ್ಲ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ವಿಜ್ಞಾನ ಬ್ಯಾಚ್‍ಗಳಿಗೆ ಅವಕಾಶ ನೀಡಬೇಕು. ಮಂಜೇಶ್ವರ ಮಂಡಲದ ಕರಾವಳಿ ಪ್ರದೇಶಗಳಲ್ಲಿ ಜೀವಶಾಸ್ತ್ರ ಸೇರಿದಂತೆ ವಿಜ್ಞಾನ ಬ್ಯಾಚ್‍ಗೆ ಒಂದೇ ಶಾಲೆ ಇದೆ. ಕುಂಬಳೆ ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 60 ಸೀಟುಗಳಿಗೆ ಸುಮಾರು ಸಾವಿರ ಅರ್ಜಿಗಳು ಬಂದಿವೆ. ಇತರೆ ಕ್ಷೇತ್ರಗಳಲ್ಲಿ 17 ರಿಂದ 20 ವಿಜ್ಞಾನ ಬ್ಯಾಚ್‍ಗಳಿದ್ದರೆ ಮಂಜೇಶ್ವರ ಕ್ಷೇತ್ರದಲ್ಲಿ ಕೇವಲ 9 ಬ್ಯಾಚ್‍ಗಳಿವೆ. ಮಂಜೇಶ್ವರದ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಅಧ್ಯಯನ ಮಾಡದಿರಲು ಸರ್ಕಾರ ನಿರ್ಧರಿಸಿದೆಯೇ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಕೇಳುತ್ತಿವೆ. ಇದೇ ರೀತಿ ಶಾಲೆಗಳಲ್ಲಿ ಕಟ್ಟಡ, ಲ್ಯಾಬ್‍ನಂತಹ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಸೀಟುಗಳು ಸಿಗದ ಕಾರಣ ಕಳೆದ ವರ್ಷ ಜಿಲ್ಲೆಯಿಂದ ಎಸ್ ಎಸ್ ಎಲ್ ಸಿ ಪಾಸಾದ 3360 ಮಕ್ಕಳು ಓದು ಮುಂದುವರಿಸಲು ಸಾಧ್ಯವಾಗಿಲ್ಲ. ಅವರಲ್ಲಿ ಹಲವರು ಶಾಲೆಯಿಂದ ಹೊರಗುಳಿಯಬೇಕಾಯಿತು. ಕಳೆದ ಬಾರಿ 19658 ಮಂದಿ ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದರು. ಇದರಲ್ಲಿ 1639 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಪೂರ್ಣ ಎ ಪ್ಲಸ್ ಪಡೆದಿದ್ದಾರೆ. ಈ ಬಾರಿ 19,466 ಮಂದಿ ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. 2,667 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ.ಕಳೆದ ಬಾರಿಗಿಂತ 1028 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ.
ಕಾಸರಗೋಡಿನ ಉತ್ತರ ಭಾಗದ ಮಂಜೇಶ್ವರ ಕ್ಷೇತ್ರವೊಂದರಲ್ಲೇ 1800ಕ್ಕೂ ಹೆಚ್ಚು ಮಕ್ಕಳು ಹೊರಗುಳಿದಿದ್ದಾರೆ. ಕೆಲವು ಶಾಲೆಗಳಲ್ಲಿ ಮಾತ್ರ ಹೈಯರ್ ಸೆಕೆಂಡರಿ ವ್ಯಾಸಂಗಕ್ಕೆ ಸೌಲಭ್ಯಗಳಿವೆ. 64 ರಷ್ಟು ಶಾಲೆಗಳು ವಿಜ್ಞಾನ ಅಧ್ಯಯನ ತರಗತಿ ಹೊಂದಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳು ಸೀಟು ಇಲ್ಲದೆ ವಿಜ್ಞಾನ ವಿಷಯಗಳನ್ನು ತೆಗೆದುಕೊಳ್ಳಲು ಪರದಾಡುತ್ತಿದ್ದಾರೆ.ಮಂಜೇಶ್ವರ ಕ್ಷೇತ್ರದಲ್ಲಿ ಕಳೆದ ಬಾರಿ ಒಟ್ಟು 60 ಸೀಟುಗಳಿಗೆ 4000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕಾಸರಗೋಡು ಮತ್ತು ಮಂಜೇಶ್ವರ ನಡುವಿನ 35 ಕಿ.ಮೀ ಅಂತರದಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಲು ಕರಾವಳಿ ಪ್ರದೇಶದಲ್ಲಿ ಒಂದೇ ಒಂದು ಶಾಲೆ ಇದೆ. ಮೇಲಾಗಿ ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಪಾಲಿಟೆಕ್ನಿಕ್ ಕಾಲೇಜು ಕೂಡ ಇಲ್ಲ. ಮಂಜೇಶ್ವರ 1800, ಕಾಸರಗೋಡು 1131, ಉದುಮ 647, ಕಾಞಂಗಾಡ್ 400 ಎಂಬಂತೆ ಕಳೆದ ಬಾರಿ ಉನ್ನತ ವ್ಯಾಸಂಗಕ್ಕೆ ಅರ್ಹತೆ ಇದ್ದರೂ ಸೀಟ್ ಲಭಿಸದೆ ಸಂಕಷ್ಟಕ್ಕೀಡಾಗಿದ್ದರು.