ಇಂಫಾಲ: ಮೈಟಿ ಅಥವಾ ಮೀಟೈ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಣಿಪುರದಲ್ಲಿ ಕುಕಿ ಉಗ್ರರು ನಡೆಸುತ್ತಿರುವ ದಾಳಿ ಮುಂದುವರೆದಿರುವಂತೆಯೇ ಇತ್ತ ಸೇನೆ ಕೂಡ ದಿಟ್ಟ ಉತ್ತರ ನೀಡಿದ್ದು ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಕನಿಷ್ಠ 40 ಮಂದಿ ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.
ಮುಂಜಾನೆ 2 ಗಂಟೆಗೆ ಬಂಡುಕೋರರು ಇಂಫಾಲ್ ಕಣಿವೆ ಮತ್ತು ಸುತ್ತಮುತ್ತಲಿನ ಐದು ಪ್ರದೇಶಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭಧ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಬೀದಿ ಬೀದಿಗಳಲ್ಲಿ ಶವಗಳು ಬಿದ್ದಿವೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸ್ವತಃ ಮಣಿಪುರದ ಸಿಎಂ ಬಿರೇನ್ ಸಿಂಗ್ ಮಾಹಿತಿ ನೀಡಿದ್ದು, ಮಣಿಪುರ ರಾಜ್ಯಾದ್ಯಂತ ಭದ್ರತಾ ಪಡೆಗಳು 40 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.
'ಮಣಿಪುರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಭದ್ರತಾ ಪಡೆಗಳು ಉಗ್ರರ ವಿರುದ್ದ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ 40 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ರಾಜ್ಯದ ಹಲವು ಜಿಲ್ಲೆಗಳ ಪ್ರದೇಶಗಳಲ್ಲಿ ಹೊಸದಾಗಿ ಘರ್ಷಣೆಗಳು ಆರಂಭವಾಗಿವೆ. ನಾಗರಿಕರ ವಿರುದ್ಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಈ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಸುಮಾರು 40 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಹಲವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
"ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ರೈಫಲ್‌ಗಳು ಮತ್ತು ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಜನರ ಮನೆಗಳನ್ನು ಸುಟ್ಟುಹಾಕಲು ಹಳ್ಳಿಗಳಿಗೆ ನುಗ್ಗಿದ್ದರು. ನಾವು ಸೇನೆ ಮತ್ತು ಇತರ ಭದ್ರತಾ ಪಡೆಗಳ ಸಹಾಯದಿಂದ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ಸುಮಾರು 40 ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿರುವ ವರದಿಗಳು ನಮಗೆ ಸಿಕ್ಕಿವೆ" ಎಂದು ತಿಳಿಸಿದರು.
"ಮಾಹಿತಿಯ ಪ್ರಕಾರ, ಕಾಕ್ಚಿಂಗ್‌ನ ಸುಗ್ನು, ಚುರಾಚಂದ್‌ಪುರದ ಕಾಂಗ್ವಿ, ಇಂಫಾಲ್ ಪಶ್ಚಿಮದ ಕಾಂಗ್‌ಚುಪ್, ಇಂಫಾಲ್ ಪೂರ್ವದ ಸಗೋಲ್ಮಾಂಗ್, ಬಿಷೆನ್‌ಪುರದ ನುಂಗೋಪೋಕ್ಪಿ, ಇಂಫಾಲ್ ಪಶ್ಚಿಮದ ಖುರ್ಖುಲ್ ಮತ್ತು ಕಾಂಗ್‌ಪೋಕ್ಪಿಯ ವೈಕೆಪಿಐನಿಂದ ಗುಂಡಿನ ದಾಳಿ ನಡೆದಿದೆ" ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆ ವಿರುದ್ಧ ಪ್ರತಿಭಟಿಸಲು ಮೇ 3 ರಂದು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಆರಂಭವಾಗಿದೆ. ಮಣಿಪುರ ಹಿಂಸಾಚಾರದಲ್ಲಿ ಇದುವರೆಗೂ 75ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೀಟೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.