ಆದರೆ, ನೀವು ಕೇಳುತ್ತಿರುವುದು ಸತ್ಯ.
ಈ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿನಿ ಹೆಸರು ಹೇಮಶ್ರಿ. ಈಕೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಗಾಂಧಿನಗರ ಗ್ರಾಮದ ಮುಪ್ಪಾಳ ಸುರೇಶ್ ಮತ್ತು ಮಣಿ ದಂಪತಿಯ ಪುತ್ರಿ. ಮಹಾತ್ಮ ಗಾಂಧಿ ಹೈಸ್ಕೂಲ್ನಲ್ಲಿ ಹೇಮಶ್ರೀ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.
ಬಾಲ್ಯದಿಂದಲೂ ಕಲಿಕೆ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಹೇಮಶ್ರೀ, ತನ್ನ ತರಗತಿ ಕಲಿಕಾ ವ್ಯಾಪ್ತಿಗಿಂತ ಹೆಚ್ಚಿನದ್ದನ್ನು ಕಲಿಯಲು ಸದಾ ಹಂಬಲಿಸುತ್ತಾಳೆ. ತರಗತಿಯಲ್ಲಿ ಎಲ್ಲರಿಗಿಂತ ಮುಂದಿರುವ ಹೇಮಶ್ರೀ ಇತರೆ ತರಗತಿಯ ವಿಷಯಗಳನ್ನು ತಿಳಿದುಕೊಂಡಿದ್ದು, ಆಕೆಯ ಮೆಮೊರಿ ಪವರ್ಗೆ ಶಾಲೆಯ ಆಡಳಿತ ಮಂಡಳಿ ಫಿದಾ ಆಗಿದ್ದು, ಆಕೆಯ ಪ್ರತಿಭೆಯನ್ನು ಶಿಕ್ಷಣ ಇಲಾಖೆಯ ಗನ್ಯ ವ್ಯಕ್ತಿಗಳ ಗಮನಕ್ಕೆ ತಂದಿದ್ದರು.
ಈ ವರ್ಷದ ಮಾರ್ಚ್ 27ರಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪ್ರಕಾಶ್ ಅವರು ಹೇಮಶ್ರೀ ಅವರ ಬುದ್ಧಿಮತ್ತೆಯನ್ನು ಪರೀಕ್ಷಿಸಿದರು. ಅವರು ಕೂಡ ಹೇಮಶ್ರೀ ಪ್ರತಿಭೆ ಕಂಡು ಆಶ್ಚರ್ಯಚಕಿತರಾದರು. ಆಕೆಯ ಪ್ರತಿಭೆಯನ್ನು ಶ್ಲಾಘಿಸಿದ ಪ್ರವೀಣ್ ಪ್ರಕಾಶ್ ಅವರು ಆಕೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಹೇಮಶ್ರೀ ತನ್ನ ಪ್ರತಿಭೆಯನ್ನು ತೋರಿದ್ದು, ಶನಿವಾರ (ಮೇ.6) ಪ್ರಕಟಗೊಂಡ ಫಲಿತಾಂಶದಲ್ಲಿ 488 ಅಂಕಗಳನ್ನು ಗಳಿಸಿದ್ದಾಳೆ.
ಆಂಧ್ರ ಪ್ರದೇಶದ 10ನೇ ತರಗತಿ ಫಲಿತಾಂಶದಲ್ಲಿ ಶೇ. 72.26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 6,050,52 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 4,37,196 ಮಂದಿ ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 2,14,220 (ಶೇ 69.27) ಹುಡುಗರು ಉತ್ತೀರ್ಣರಾಗಿದ್ದರೆ, 2,22,976 (ಶೇ 75.38) ಹುಡುಗಿಯರು ತೇರ್ಗಡೆ ಹೊಂದಿದ್ದಾರೆ. ಪಾರ್ವತಿಪುರಂ ಮಾನ್ಯಂ ಜಿಲ್ಲೆ ಶೇ.87.47ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಶೇ. 60.39 ಫಲಿತಾಂಶದೊಂದಿಗೆ ನಂದ್ಯಾಲ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.