ನವದೆಹಲಿ: ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದಿಂದ ಸೃಷ್ಟಿಸಲಾದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೆಟ್ಟಿಗರ ಹುಬ್ಬೇರಿಸುತ್ತಿದೆ. ಇದೀಗ ಅಂಥದ್ದೇ ಮತ್ತೊಂದು ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೋದಲ್ಲಿ ವಧುವಿನಂತೆ ಉಡುಗೆ ಧರಿಸಿರುವ ಐದು ವರ್ಷದ ಬಾಲೆಯನ್ನು ಕಾಣಬಹುದು. ಆ ಬಾಲಕಿ 5 ವರ್ಷದಿಂದ 95 ವರ್ಷದ ವೃದ್ಧೆಯವರೆಗೂ ವಿವಿಧ ಹಂತಗಳಲ್ಲಿ ಹೇಗೆ ಕಾಣತ್ತಾಳೆ ಎಂಬುದನ್ನು ಎಐ ತಂತ್ರಜ್ಞಾನದ ಮೂಲಕ ರಚಿಸಲಾಗಿದೆ. ಬಾಲ್ಯಾವಸ್ಥೆ, ಹರಿಹರೆಯದ ಹಂತ, ಯುವತಿ, ಗೃಹಿಣಿ ಹಾಗೂ ಅಂತಿಮವಾಗಿ ವೃದಾಪ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ವಿಡಿಯೋ ಬಹಳ ನೈಜ್ಯವಾಗಿ ಮೂಡಿಬಂದಿದ್ದು ಸ್ವತಃ ಆನಂದ್ ಮಹೀಂದ್ರಾ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ತುಂಬಾ ಕಾಡುವ ಸುಂದರ ಮತ್ತು ಮಾನವನನ್ನು ರಚಿಸಲು ಸಾಧ್ಯವಾದರೆ ಅಂತಹ ಎಐ ಶಕ್ತಿಗೆ ನಾನು ಹೆದರುವುದಿಲ್ಲ. ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಎಐ ಎಂದರೇನು?
ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್ಗಳು, ಸ್ವಯಂಚಾಲಿತ ಕಾರ್ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು 'ಕೃತಕ ಬುದ್ಧಿಮತ್ತೆಯ ಜನಕ' ಎಂದು ಗುರುತಿಸುತ್ತಾರೆ.