ನವದೆಹಲಿ:ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ನಮನ ಸಲ್ಲಿಸಿದ್ದಾರೆ.
ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸೇರಿದಂತೆ ಇತರರು ದಿಲ್ಲಿಯ ಶಾಂತಿವನದಲ್ಲಿರುವ ನೆಹರೂ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆ ಇಲ್ಲದೆ 21 ನೇ ಶತಮಾನದ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಖರ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಹಲವು ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
1889 ರಲ್ಲಿ ಜನಿಸಿದ ನೆಹರೂ ಅವರು ಭಾರತದ ಅತ್ಯಂತ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿ ಉಳಿದಿದ್ದಾರೆ. ಅವರು ಆಗಸ್ಟ್ 1947 ಮತ್ತು ಮೇ 1964 ರ ನಡುವೆ ಪ್ರಧಾನಿಯಾಗಿದ್ದರು. ಅವರು ಮೇ 27, 1964 ರಂದು ನಿಧನರಾದರು.
"ಇಂದು ನಮ್ಮ ಮೊದಲ ಪ್ರಧಾನಿ ಹಾಗೂ ಆಧುನಿಕ ಭಾರತದ ವಾಸ್ತುಶಿಲ್ಪಿ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ. ಹೊಸ ಆರ್ಥಿಕ ನೀತಿಗಳು ಹಾಗೂ ಕೈಗಾರಿಕಾ ಸ್ಥಾಪನೆಗಳ ಮೂಲಕ ರಾಷ್ಟ್ರವನ್ನು ಎತ್ತರಕ್ಕೆ ಮುನ್ನಡೆಸಿದ ದಾರ್ಶನಿಕ. ಅವರ ಮಾರ್ಗದರ್ಶನದಲ್ಲಿ ಐಐಟಿಗಳು, ಐಐಎಂಗಳು, ಎಐಐಎಂಎಸ್, ಡಿಆರ್ ಡಿಒ ಸೇರಿದಂತೆ ಪರಮಾಣು ಹಾಗೂ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. ನೆಹರೂ ಅವರು ಪರಂಪರೆಯನ್ನು ನಾವು ಗೌರವಿಸುತ್ತೇವೆ'' ಎಂದು ಕಾಂಗ್ರೆಸ್ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದೆ.