ನವದೆಹಲಿ : ಪರಿಶಿಷ್ಟ ಪಂಗಡಗಳಿಗೆ ಸೇರದ ನಾಗರಿಕರು ಕೆಲವೊಂದು ನಿರ್ಬಂಧಗಳಿಗೆ ಒಳಪಟ್ಟು ಸಂವಿಧಾನದ ಐದನೇ ಶೆಡ್ಯೂಲ್‌ನಡಿ ಬರುವ ಸ್ಥಳಗಳಲ್ಲಿ ವಾಸಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಂತಹ ನಾಗರಿಕರಿಗೆ ಐದನೇ ಶೆಡ್ಯೂಲ್ ಪ್ರದೇಶಗಳಲ್ಲಿ ಮತದಾನದ ಹಕ್ಕು ಕೂಡ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರದೇಶಗಳನ್ನು ಗುರುತು ಮಾಡುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ಐದನೇ ಶೆಡ್ಯೂಲ್ ನೀಡುತ್ತದೆ.
ಪ್ರಸ್ತುತ ದೇಶದ ಹತ್ತು ರಾಜ್ಯಗಳು- ಆಂಧ್ರ ಪ್ರದೇಶ, ಛತ್ತೀಸಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತೆಲಂಗಾಣ ಐದನೇ ಶೆಡ್ಯೂಲ್ ಪ್ರದೇಶಗಳನ್ನು ಹೊಂದಿದೆ.
ಆದಿವಾಸೀಸ್ ಫಾರ್ ಸೋಶಿಯಲ್ ಎಂಡ್ ಹ್ಯೂಮನ್ ರೈಟ್ಸ್ ಆಕ್ಷನ್ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ. ಆದಿವಾಸಿಗಳಲ್ಲದ ನಾಗರಿಕರಿಗೆ ಶೆಡ್ಯೂಲ್ಡ್ ಪ್ರದೇಶಗಳಲ್ಲಿ ವಾಸಿಸುವ ಹಕ್ಕಿದೆ ಎಂದು ಒಡಿಶಾ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಈ ಸಂಘಟನೆ ಸುಪ್ರೀಂ ಕೋರ್ಟಿನ ಮೊರೆ ಹೋಗಿತ್ತು.
1977ರಿಂದ ಶೆಡ್ಯೂಲ್ಡ್ ಪ್ರದೇಶವಾಗಿರುವ ಸುಂದರಘರ್ ಜಿಲ್ಲೆಗೆ ಸಂಬಂಧಿಸಿದಂತೆ ಒಡಿಶಾ ಹೈಕೋರ್ಟ್ ಆದೇಶ ಬಂದಿತ್ತು.
ಐದನೇ ಶೆಡ್ಯೂಲ್ ಸಂಸತ್ತು ಅಂಗೀಕರಿಸಿದ ಕಾನೂನು ಎಂಬ ಸಂಘಟನೆಯ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದೊಂದು ಕಾನೂನು ಎಂದು ತಿಳಿದರೂ, ಸಂವಿಧಾನದ ವಿಧಿ 19(1) ಅಡಿ ಪ್ರದತ್ತವಾದ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಅದು ನಿರ್ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಐದನೇ ಶೆಡ್ಯೂಲ್‌ಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಸೀಮಿತವಾಗಿದೆ ಹಾಗೂ ಒಂದು ನಿರ್ದಿಷ್ಟ ಕಾನೂನು ಒಂದು ಶೆಡ್ಯೂಲ್ಡ್ ಪ್ರದೇಶಕ್ಕೆ ಅನ್ವಯಿಸುವುದಿಲ್ಲ ಅಥವಾ ಮಾರ್ಪಾಡುಗಳೊಂದಿಗೆ ಅನ್ವಯಿಸುತ್ತದೆ ಎದು ಸೂಚಿಸುವುದಕ್ಕೆ ಸೀಮಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದಿವಾಸೀಸ್ ಫಾರ್ ಸೋಶಿಯಲ್ ಎಂಡ್ ಹ್ಯೂಮನ್ ರೈಟ್ಸ್ ಆಕ್ಷನ್ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ಸಂಘಟನೆ ಆದಿವಾಸಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳುತ್ತಿರುವುದರಿಂದ ಅದಕ್ಕೆ ದಂಡ ವಿಧಿಸಿಲ್ಲ ಎಂದು ಹೇಳಿದೆ.