ನವದೆಹಲಿ: ವಕೀಲರಾಗಿ ವೃತ್ತಿ ಆರಂಭಿಸಲು ಕಾನೂನು ಪದವೀಧರರಿಗೆ ₹600ಕ್ಕಿಂತ ಹೆಚ್ಚಿನ ನೋಂದಣಿ ಶುಲ್ಕ ವಿಧಿಸುವಂತಿಲ್ಲ ಎಂದು ಎಲ್ಲ ರಾಜ್ಯಗಳ ವಕೀಲರ ಪರಿಷತ್‌ಗಳಿಗೆ (ಸ್ಟೇಟ್ ಬಾರ್ ಕೌನ್ಸಿಲ್) ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ಕಡಿಮೆ ಆದಾಯ ಹೊಂದಿರುವ ಕಾನೂನು ಪದವೀಧರರಿಗೆ ಇದು ದೊಡ್ಡ ನಿರಾಳತೆ ನೀಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು, ಈ ಸಂಬಂಧ ಎಲ್ಲ ರಾಜ್ಯಗಳ ಬಾರ್ ಕೌನ್ಸಿಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಕಾನೂನು ಪದವೀಧರರ ನೋಂದಣಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಮತ್ತು ಅವರಿಂದ ಒಂದು ವರ್ಷದಲ್ಲಿ ಎಷ್ಟು ಹಣ ಸಂಗ್ರಹಿಸಲಾಗುತ್ತದೆ? ಎನ್ನುವುದನ್ನು ತಿಳಿಸಲು ಸೂಚಿಸಿದ್ದಾರೆ.
ವಕೀಲರ ಕಾಯ್ದೆ ಪ್ರಕಾರ, ಶಿಫಾರಸು ಮಾಡಲಾದ ನಿಯಮಗಳಡಿ ನೋಂದಣಿ ಶುಲ್ಕವನ್ನು ₹600 ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಬಾರ್ ಕೌನ್ಸಿಲ್ ವಿಧಿಸುವಂತಿಲ್ಲ ಎಂದು ಪೀಠ ಹೇಳಿತು.
ಭಾರತೀಯ ವಕೀಲರ ಪರಿಷತ್ (ಬಿಸಿಐ) ಪರ ಹಾಜರಿದ್ದ ಹಿರಿಯ ವಕೀಲ ಮೆನನ್ ಕುಮಾರ್ ಮಿಶ್ರಾ ಅವರು ₹600 ಶುಲ್ಕ ವಿಧಿಸಿರುವುದು 1993ರಲ್ಲಿ ಮತ್ತು ಆಗಿನಿಂದ ಈವರೆಗೆ ಎಲ್ಲದರ ಬೆಲೆಗಳು ಏರಿಕೆಯಾಗಿವೆ ಎಂದು ವಾದಿಸಿದರು. ಬಿಸಿಐ ಅಧ್ಯಕ್ಷರೂ ಆಗಿರುವ ಮಿಶ್ರಾ ಅವರ ವಾದವನ್ನು ಪೀಠ ಒಪ್ಪಲಿಲ್ಲ.
ವಕೀಲಿಕೆ ಕಾನೂನು ಸೇವಾ ಆಧರಿತ ವೃತ್ತಿ. ಅನಗತ್ಯ, ದುಬಾರಿ ಶುಲ್ಕಗಳು ಬಡತನದ ಹಿನ್ನೆಲೆಯಿಂದ ಬರುವವರ ಹಿತಾಸಕ್ತಿಯನ್ನು ಬಲಿತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಹೇಳಿದೆ.
'ಇದೊಂದು ಮಹತ್ವದ ವಿಚಾರ. ಇಷ್ಟೊಂದು ದುಬಾರಿ ಶುಲ್ಕವು ವಕೀಲರ ಕಾಯ್ದೆ 1961ರ ಸೆಕ್ಷನ್ 24ರ ಉಲ್ಲಂಘನೆಯಾಗಿದೆ. ಈ ಬಗ್ಗೆ ನಾವು ನೋಟಿಸ್ ನೀಡುತ್ತೇವೆ' ಎಂದು ಪೀಠ ಹೇಳಿತು.
ಈ ವಿಷಯದಲ್ಲಿ ನ್ಯಾಯಾಲಯದ ಪರವಾಗಿ ಪ್ರತಿನಿಧಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದ ಪೀಠವು, ಬೇಸಿಗೆ ರಜೆ ಮುಗಿದ ನಂತರ ವಿಚಾರಣೆ ನಡೆಸುವುದಾಗಿ ಪ್ರಕರಣ ಮುಂದೂಡಿತು.
ಒಡಿಶಾದಲ್ಲಿ ₹41,100 ಮತ್ತು ಕೇರಳದಲ್ಲಿ ₹20,050 ಶುಲ್ಕ ವಿಧಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.