ಕಾಸರಗೋಡು: ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 67.30ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ನಗರ ಮತ್ತು ನೀಲೇಶ್ವರದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ನಗರದಲ್ಲಿ ಡಿವೈಎಸ್‍ಪಿ ಪಿ.ಕೆ ಸುಧಾಕರನ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಚೇರೂರು ನಿವಾಸಿ ಎಂ.ಕೆ ಅಬ್ದುಲ್ ಖಾದರ್ ಮಹಸೂಪ್, ನೆಲ್ಲಿಕುಂಜೆ ಬಂಗಾರಕುನ್ನು ನಿವಾಸಿ ಮಹಮ್ಮದ್ ಶಾಫಿ, ನಾಯಮರ್‍ಮೂಲೆ ನಿವಾಸಿ ಎಂ.ಎ ರಹಮಾನ್ ಎಂಬವರನ್ನು ಬಂಧಿಸಲಗಿದೆ. ಪಿಲಿಕುಂಜೆ ಚಂದ್ರಗಿರಿ ರಸ್ತೆಯಲ್ಲಿ ಎಂ.ಕೆ ಅಬ್ದುಲ್ ಖಾದರ್ ಮಹಸೂಪ್ ಸಂಚರಿಸುತ್ತಿದ್ದ ಬೈಕ್ ತಪಾಸಣೆ ನಡೆಸಿದಾಗ 30ಲಕ್ಷ ರೂ. ಕಾಳಧನ ಪತ್ತೆಯಾಗಿದ್ದರೆ, ಕೋಟೆಕಣಿ ರಸ್ತೆಯಲ್ಲಿ ಬೈಕಲ್ಲಿ ಸಂಚರಿಸುತ್ತಿದ್ದ ನೆಲ್ಲಿಕುಂಜೆ ಬಂಗಾರಕುನ್ನು ನಿವಾಸಿ ಮಹಮ್ಮದ್ ಶಾಫಿ, ನಾಯಮರ್‍ಮೂಲೆ ನಿವಾಸಿ ಎಂ.ಎ ರಹಮಾನ್ ಅವರನ್ನು ತಪಾಸಣೆ ನಡೆಸಿದಾಗ 18.80ಲಕ್ಷ ರೂ. ನಗದು ಪತ್ತೆಯಾಗಿದೆ.
ನೀಲೇಶ್ವರದ ಮಾರುಕಟ್ಟೆ ವಠಾರದಲ್ಲಿಕಾಞಂಗಾಡು ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲಿಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 18.50ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಪೂಂಜಾವಿ ನಿವಾಸಿ ಇರ್ಷಾದ್ ಕೆ.ಕೆ ಎಂಬಾತನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನೇತೃತ್ವದ ಆಪರೇಶನ್ ಕ್ಲೀನ್ ಕಾಸರಗೋಡು ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾದಕ ದ್ರವ್ಯ, ಹವಲಾ ಹಣ, ಚಿನ್ನ ಕಳ್ಳ ಸಾಗಾಟ ನಡೆದುಬರುತ್ತಿದ್ದು, ಈ ಎಲ್ಲ ದಂಧೆಗಳಿಗೂ ಪರಸ್ಪರ ಸಂಬಂಧವಿರುವ ಬಗ್ಗೆ ಹಾಗೂ ಈ ಹಣ ಎಲ್ಲಿಗೆ ರವಾನೆಯಾಗುತ್ತಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.